ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಾಮೀನು ಪಡೆದು ಜೈಲಿನಿಂದ ಹೊರಬಂದಾಗ ಅವರ ನಿವಾಸದ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಕ್ಕಾಗಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿಯಲ್ಲಿ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧವಿದೆ. ಆದರೂ ಸಹ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಿದ್ದನ್ನು ಸಂಭ್ರಮಿಸುವುದಕ್ಕಾಗಿ ದೆಹಲಿಯ ಸಿವಿಲ್ ಲೈನ್ಸ್ ನಿವಾಸದ ಎದುರು ಶನಿವಾರ ಪಟಾಕಿ ಸಿಡಿಸಲಾಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಪಟಾಕಿಯ ಉತ್ಪಾದನೆ, ಮಾರಾಟ, ಬಳಕೆಗೆ ನಿಷೇಧವಿದೆ. ಕೇಜ್ರಿವಾಲ್ ಸರ್ಕಾರವೇ ಪಟಾಕಿಗೆ ನಿರ್ಬಂಧ ವಿಧಿಸಿತ್ತು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223 (ಸಾರ್ವಜನಿಕ ಸೇವಕರು ಹೊರಡಿಸಿದ ಆದೇಶಗಳಿಗೆ ಅವಿಧೇಯತೆ) ಅಡಿಯಲ್ಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಖ್ಯಮಂತ್ರಿ ಅಧಿಕೃತ ನಿವಾಸದ ಹೊರಗೆ ಪಟಾಕಿ ಸಿಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಸಿಎಂ ನಿವಾಸದ ಹೊರಗೆ ಪಟಾಕಿ ಸಿಡಿಸಲಾಗಿತ್ತು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಮ್ಮ ನಾಯಕನನ್ನು ಸ್ವಾಗತಿಸಲು ಜಮಾಯಿಸಿದ್ದರು.
ಶುಕ್ರವಾರ ಸಂಜೆ 6 ಫ್ಲಾಗ್ ಸ್ಟಾಫ್ ರಸ್ತೆಯಲ್ಲಿ ನಿಯೋಜಿಸಲಾಗಿದ್ದ ಸಬ್ ಇನ್ಸ್‌ಪೆಕ್ಟರ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. "ನಾನು ಸಂಜೆ 6.45 ಕ್ಕೆ ಕಾನೂನು ಮತ್ತು ಸುವ್ಯವಸ್ಥೆಗಾಗಿ 6 ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿ ನಿಯೋಜಿಸಲ್ಪಟ್ಟಿದ್ದೇನೆ. ಬಹಳಷ್ಟು ಜನರು ಜಮಾಯಿಸಿದ್ದರು ಮತ್ತು ಮಾಲಿನ್ಯವನ್ನು ಉಂಟುಮಾಡುವ ಪಟಾಕಿಗಳ ಸದ್ದು ನನಗೆ ಕೇಳಿಸಿತು" ಎಂದು ಅವರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಅಧಿಕಾರಿ ನೋಡಲು ಹೋದಾಗ ಪಟಾಕಿ ಸಿಡಿಸುತ್ತಿದ್ದವರು ಓಡಿಹೋದರು. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದೆ. ಐದು ತಿಂಗಳಿಗೂ ಹೆಚ್ಚು ಕಾಲ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದರು.