ನವದೆಹಲಿ: ಒಡಿಶಾದ ಪೊಲೀಸ್ ಠಾಣೆಯೊಂದರಲ್ಲಿ ಸೇನಾ ಅಧಿಕಾರಿಯೊಬ್ಬರ ಭಾವಿ ಪತ್ನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಶುಕ್ರವಾರ ಕಾಂಗ್ರೆಸ್ ಖಂಡಿಸಿದ್ದು, ಈ "ಭಯಾನಕ" ಘಟನೆಯು ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
“ಸೇನಾ ಅಧಿಕಾರಿಯೊಬ್ಬರು ಸಹಾಯಕ್ಕಾಗಿ ಪೊಲೀಸರ ಬಳಿಗೆ ಹೋದಾಗ ಪೊಲೀಸರು ಅವರನ್ನು ಅತ್ಯಂತ ಕ್ರೂರವಾಗಿ ಥಳಿಸಿದ್ದಾರೆ ಮತ್ತು ಅವರ ಭಾವಿ ಪತ್ನಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ. ಈ ಹೇಯ ಘಟನೆ ಇಡೀ ಮಾನವೀಯತೆಗೆ ನಾಚಿಕೆಗೇಡಿನ ಸಂಗತಿ ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಬಿಜೆಪಿ ಸರ್ಕಾರದ ಅಡಿಯಲ್ಲಿ, ಮಹಿಳೆಯರ ಮೇಲಿನ ಅಪರಾಧಗಳು ಸಂಪೂರ್ಣವಾಗಿ ಅನಿಯಂತ್ರಿತ. ಸರ್ಕಾರಿ ವ್ಯವಸ್ಥೆಯಲ್ಲೇ ಅನ್ಯಾಯ ವಿಜೃಂಭಿಸಿ ಆಶ್ರಯ ಪಡೆದಾಗ, ಸಾಮಾನ್ಯ ನಾಗರಿಕರು ಯಾರ ಸಹಾಯ ಪಡೆಯಬೇಕು? ಈ ಪ್ರಕರಣದ ಎಲ್ಲಾ ತಪ್ಪಿತಸ್ಥರು ಕಠಿಣ ಕಾನೂನು ಶಿಕ್ಷೆಗೆ ಅರ್ಹರು - ಭಾರತದ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ನ್ಯಾಯ ಒದಗಿಸಲು ಅವರ ವಿರುದ್ಧ ಮಾದರಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ” ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಕಳೆದ ಸೆಪ್ಟೆಂಬರ್ 14ರಂದು ಭುವನೇಶ್ವರದಲ್ಲಿ ರೆಸ್ಟೋರೆಂಟ್ ಮುಚ್ಚಿದ ಬಳಿಕ ನಾನು ನನ್ನ ಭಾವಿ ಪತಿಯ ಜೊತೆ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ. ಈ ಬಗ್ಗೆ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದೆವು. ಆದರೆ ದೂರು ನೀಡಲು ಹೋದ ನಮ್ಮನ್ನೇ ಲಾಕಪ್‌ಗೆ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಸೇನಾ ಅಧಿಕಾರಿಯ ಭಾವಿ ಪತ್ನಿ ಆರೋಪಿಸಿದ್ದಾರೆ.