ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯ ಅಥವಾ ಸುಪ್ರೀಂ ಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನೇ ಕಿಡಿಗೇಡಿಗಳು ಶುಕ್ರವಾರ ಹ್ಯಾಕ್ ಮಾಡಿದ್ದಾರೆ.
ಖದೀಮರು ದೇಶದ ಸರ್ವೋಚ್ಚ ನ್ಯಾಯಾಲಯದ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿ ಇಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಇತರ ಪ್ರಮೋಶನ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ತಾಂತ್ರಿಕ ತಂಡ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ತಾತ್ಕಾಲಿಕ ಸ್ಥಗಿತಗೊಳಿಸಿ ಸರಿಪಡಿಸುವ ಕಾರ್ಯ ಆರಂಭಿಸಿದೆ.
ಸುಪ್ರೀಂ ಕೋರ್ಟ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ವಿಚಾರಣೆಗಳ ನೇರ ಪ್ರಸಾರ ಮಾಡುತ್ತದೆ. ಇತ್ತೀಚೆಗೆ ಕೋಲ್ಕತಾ ಆರ್‌ಜಿ ಕಾರ್ ಆಸ್ಪತ್ರೆ ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡಿತ್ತು. ಇನ್ನು ವಿಚಾರಣೆಗಳ ವಿಡಿಯೋಗಳು ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.
ಆದರೆ ಖದೀಮರು ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ ಬಳಿಕ ಅಮೆರಿಕದ ಮೂಲದ ರಿಪ್ಪಲ್ ಲ್ಯಾಬ್ಸ್ ಜಾಹೀರಾತು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೈಕಿ ಕ್ರಿಪ್ಟೋಕರೆನ್ಸಿ, ಎಕ್ಸ್ಆರ್‌ಪಿ ಸೇರಿದಂತೆ ಇತರ ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ರಿಪ್ಪಲ್ ಲ್ಯಾಬ್ಸ್ ವಿಡಿಯೋಗಳನ್ನು ಎಲ್ಲೆಡೆ ಪೋಸ್ಟ್ ಮಾಡುತ್ತಿರುವ ಕುರಿತು ಇತ್ತೀಚೆಗೆ ಯೂಟ್ಯೂಬ್ ವಿರುದ್ಧವೇ ಕಾನೂನು ಹೋರಾಟ ಆರಂಭಿಸಲಾಗಿತ್ತು. ಹಲವು ಹ್ಯಾಕರ್ಸ್ ತಮ್ಮ ಚಾನೆಲ್ ವಿಡಿಯೋಗಳನ್ನು ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡುತ್ತಿರುವ ಕುರಿತು ದೂರು ನೀಡಲಾಗಿದೆ.
ತಾಂತ್ರಿಕ ತಂಡ ಸುಪ್ರೀಂ ಕೋರ್ಟ್ ಚಾನೆಲ್ ತಾತ್ಕಾಲಿಕ ಸ್ಥಗಿತಗೊಳಿಸಿದೆ. ಈ ಕುರಿತು ಬ್ಯಾಕ್ಎಂಡ್ ಟೀಮ್ ಕಾರ್ಯಪ್ರವೃತ್ತರಾಗಿದ್ದು, ಶೀಘ್ರದಲ್ಲೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ಎಂದಿನಂತೆ ಯೂಟ್ಯೂಬ್ ಚಾನೆಲ್ ಕಾರ್ಯಪ್ರವೃತ್ತಗೊಳ್ಳಲಿದೆ. ಸದ್ಯ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಲಭ್ಯವಿಲ್ಲ. ಇಲ್ಲಿರುವ ಯಾವುದೇ ವಿಡಿಯೋಗಳು ವೀಕ್ಷಣೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಹೆಸರಲ್ಲಿ ನಕಲಿ ವೆಬ್‌ಸೈಟ್
ಈ ಹಿಂದೆ ಕೂಡ ಸುಪ್ರೀಂ ಕೋರ್ಟ್ ಹೆಸರಿನಲ್ಲಿದ್ದ ನಕಲಿ ವೆಬ್ ಸೈಟ್ ವೊಂದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ರಹಸ್ಯ ಮಾಹಿತಿಯನ್ನು ಕದಿಯಲು ಕಳೆದ ವರ್ಷ ನಕಲಿ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನ್ನು ರಚಿಸಲಾಗಿತ್ತು. ನಕಲಿ ವೆಬ್‌ಸೈಟ್ ಹಗರಣ ಬೆಳಕಿಗೆ ಬಂದ ನಂತರ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ವಕೀಲರು ಮತ್ತು ದಾವೆದಾರರು ಆನ್‌ಲೈನ್ ವಹಿವಾಟುಗಳೊಂದಿಗೆ ಜಾಗರೂಕರಾಗಿರಿ ಎಂದು ಎಚ್ಚರಿಸಿದ್ದರು.