ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ. ವಿಶ್ವದ ಬೇರೆ ನಾಯಕರೊಂದಿಗೆ ಅಮೆರಿಕದ ವಿಲ್ಮಿಂಗ್ಟನ್ ಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ತವರು ರಾಜ್ಯ ಡೆಲವಾರೆಯಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರಿಗೆ ಆತಿಥ್ಯ ನೀಡಲಿರುವ ಅಧ್ಯಕ್ಷ ಜೋ ಬೈಡನ್ ಅವರು ನಂತರ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪ್ರಧಾನ ಮಂತ್ರಿಗಳು ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿ ಕಚೇರಿ, ಪ್ರಧಾನ ಮಂತ್ರಿಗಳು ಕ್ವಾಡ್ ಶೃಂಗಸಭೆ, ಸಮುದಾಯ ಕಾರ್ಯಕ್ರಮ, ಭವಿಷ್ಯದ ಶೃಂಗಸಭೆ ಮತ್ತು ಇತರ ದ್ವಿಪಕ್ಷೀಯ ಸಭೆಗಳನ್ನು ಉದ್ದೇಶಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
'ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿಗಾಗಿ ಕೆಲಸ ಮಾಡುವ ಪ್ರಮುಖ ಗುಂಪಾಗಿ ಕ್ವಾಡ್ ಹೊರಹೊಮ್ಮಿದೆ' ಎಂದು ಪ್ರಧಾನಿ ಮೋದಿ ಅವರು ಯುಎಸ್ ಭೇಟಿ ಸಂದರ್ಭದಲ್ಲಿ ಹೇಳಿದ್ದಾರೆ.
ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಸಿಯಂನಿಂದ ನಾಳೆ ಪ್ರಧಾನಮಂತ್ರಿಗಳು ಭಾರತೀಯ ಸಮುದಾಯದವರನ್ನು ಭೇಟಿ ಮಾಡಿ ಅವರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದ್ದು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕ್ವಾಡ್ ಶೃಂಗಸಭೆಯಲ್ಲಿ ನನ್ನ ಸ್ನೇಹಿತರಾದ ಅಧ್ಯಕ್ಷ ಬೈಡನ್, ಪ್ರಧಾನಿ ಅಲ್ಬನೀಸ್ ಮತ್ತು ಪ್ರಧಾನಿ ಕಿಶಿದಾ ಅವರನ್ನು ನಾನು ಎದುರು ನೋಡುತ್ತಿದ್ದಾನೆ ಎಂದು ಮೋದಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಈ ವೇದಿಕೆಯು ಶಾಂತಿಯನ್ನು ಉತ್ತೇಜಿಸುವ ಸಮಾನ ಮನಸ್ಕ ರಾಷ್ಟ್ರಗಳ ವೇದಿಕೆಯಾಗಲಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಗತಿ, ಮತ್ತು ಸಮೃದ್ಧಿ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜತೆ ಎರಡೂ ರಾಷ್ಟ್ರಗಳ ಮತ್ತು ಜಾಗತಿಕ ಹಿತಾಸಕ್ತಿಗಳ ಸುಧಾರಣೆಗಾಗಿ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಕ್ವಾಡ್ ಶೃಂಗಸಭೆಯನ್ನು ಚತುರ್ಭುಜ ಭದ್ರತಾ ಸಂವಾದ ಎಂದು ಕರೆಯಲಾಗುತ್ತದೆ. ಭಾರತ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.