ಕಥುವಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಓರ್ವ ಪೊಲೀಸ್ ಹುತಾತ್ಮರಾಗಿ ಇಬ್ಬರು ಅಧಿಕಾರಿಗು ಗಾಯಗೊಂಡಿದ್ದಾರೆ.
ಭಯೋತ್ಪಾದಕರ ಗುಂಪೊಂದು ಮನೆಯೊಳಗೆ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕಥುವಾ ಜಿಲ್ಲೆ ಕೋಗ್ (ಮಂಡ್ಲಿ) ಗ್ರಾಮದಲ್ಲಿ ಭದ್ರತೆಗಳು ಕಾರ್ಯಾಚರಣೆಗಿಳಿದಿದ್ದವು.
ಥುವಾದಲ್ಲಿನ ಬಿಲ್ಲವರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಗ್ (ಮಂಡ್ಲಿ) ಗ್ರಾಮದಲ್ಲಿ ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.
ಭದ್ರತಾ ಪಡೆಗಳ ಜಂಟಿ ತಂಡವು ಉಗ್ರರು ಅಡಗಿದ್ದ ಸ್ಥಳವನ್ನು ಸಮೀಪಿಸುತ್ತಿದ್ದಂತೆಯೇ ಅಡಗಿ ಕುಳಿತಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ. ಈ ವೇಲೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಕಾಳಗ ಆರಂಭವಾಗಿದ್ದು, ಕಾರ್ಯಾಚರಣೆಗೆ ಮತ್ತಷ್ಟು ಸೇನಾಪಡೆ ಸ್ಥಳಕ್ಕೆ ಧಾವಿಸಿವೆ.
ಗುಂಡಿನ ಚಕಮಕಿ ವೇಳೆ ಮುಖ್ಯ ಪೇದೆ ಹೆಚ್'ಸಿ.ಬಷೀರ್ ಅಹ್ಮದ್ ಅವರು ಹುತಾತ್ಮರಾಗಿದ್ದು, ಎಎಸ್ಐ ಹಾಗೂ ಮತ್ತೋರ್ವ ಅಧಿಕಾರಿ ಗಾಯಗೊಂಡಿದ್ದಾರೆಂದು ಸಹಾಯಕ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಕುಲ್ಗಾಮ್ ನಲ್ಲಿ ಶನಿವಾರ ನಡೆಸಿದ ಎನ್ಕೌಂಟರ್ ನಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹಗಳನ್ನು ಗುರುತಿಸಲು, ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ದಕ್ಷಿಣ ಕಾಶ್ಮೀರದ ಡಿಐಜಿ ಜಾವೇದ್ ಅಹ್ಮದ್ ಮಾತೂ ಹೇಳಿದ್ದಾರೆ,
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳು 2 ಎಕೆ 47 ರೈಫಲ್‌ಗಳು, 5 ಮ್ಯಾಗಜೀನ್‌ಗಳು, ಪಿಸ್ತೂಲ್, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.
ಇಬ್ಬರು ಭಯೋತ್ಪಾದಕರ ಪೈಕಿ ಓರ್ವನನ್ನು ಕುಲ್ಗಾಮ್‌ನ ಚವಾಲ್ಗಾಮ್ ಗ್ರಾಮದ ನಿವಾಸಿ ಉಮೇಶ್ ಅಹ್ಮದ್ ವಾನಿ ಎಂದು ಶಂಕಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ನಡುವೆ ಇದೇ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಮೂವರು ಸೇನಾ ಸಿಬ್ಬಂದಿ ಮತ್ತು ಒಬ್ಬ ಪೊಲೀಸ್ ಸಿಬ್ಬಂದಿ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.