ನವದೆಹಲಿ: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿಗೆ ಸುಣ್ಣ ಬಳಿಯುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಸೂಚಿಸಿರುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಮಸೀದಿಯ ಸುಣ್ಣ ಬಳಿಯುವ ಕಾರ್ಯವನ್ನು ಒಂದು ವಾರದೊಳಗೆ ಪೂರ್ಣಗೊಳಿಸಲು ಅಲಹಾಬಾದ್ ಹೈಕೋರ್ಟ್ ಮಾರ್ಚ್ 12ರಂದು ಎಎಸ್‌ಐಗೆ ಸೂಚಿಸಿತ್ತು.
'ಈ ಅರ್ಜಿಯನ್ನು ಪರಿಗಣಿಸಲು ನಾವು ಒಲವು ತೋರುತ್ತಿಲ್ಲ. ವಜಾಗೊಳಿಸಲಾಗಿದೆ' ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ ಆದೇಶಿಸಿತು.
ಮೇಲ್ಮನವಿ ಸಲ್ಲಿಸಿರುವ ಸತೀಶ್ ಕುಮಾರ್ ಅಗರ್ವಾಲ್ ಪರ ವಕೀಲ ಬರುಣ್ ಸಿನ್ಹಾ, ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಮಸೀದಿಯ ಗೋಡೆಗೆ ಸುಣ್ಣ ಬಳಿಯಲು ಸೂಚಿಸಿರುವುದು ತಪ್ಪಾಗಿದೆ. ಈ ನಿರ್ಧಾರ ನ್ಯಾಯಸಮ್ಮತವಲ್ಲ ಎಂದು ವಾದಿಸಿದರು.
'ಇಂದಿನಿಂದ ASI ಸುಣ್ಣ ಬಳಿಯುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕು ಮತ್ತು ಅದನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು' ಎಂದು ಹೈಕೋರ್ಟ್ ನ್ಯಾಯಾಧೀಶ ರೋಹಿತ್ ರಂಜನ್ ಅಗರ್ವಾಲ್ ತಮ್ಮ ಆದೇಶದಲ್ಲಿ ಹೇಳಿದ್ದರು.
ಇದಲ್ಲದೆ, ಗೋಡೆಗಳ ಮೇಲೆ ಯಾವುದೇ ಹೆಚ್ಚುವರಿ ದೀಪಗಳನ್ನು ಹಾಕಬಾರದು. ಏಕೆಂದರೆ, ಇದು ಸ್ಮಾರಕಕ್ಕೆ ಹಾನಿಯನ್ನುಂಟುಮಾಡಬಹುದು. ಆದರೆ, ಫೋಕಸ್ ದೀಪಗಳು/ಎಲ್ಇಡಿ ದೀಪಗಳ ಆಕಾರದಲ್ಲಿರುವ ಹೊರಗಿನ ದೀಪಗಳನ್ನು ಮಸೀದಿಯ ಹೊರ ಭಾಗದಲ್ಲಿ ಬೆಳಕಿಗೆ ಬಳಸಬಹುದು ಎಂದು ASIಗೆ ಆದೇಶಿಸಿತ್ತು.
'ಸುಣ್ಣ ಬಳಿಯುವಿಕೆಗೆ ತಗಲುವ ವೆಚ್ಚವನ್ನು ಮಸೀದಿ ಸಮಿತಿಯು ಭರಿಸಬೇಕು ಮತ್ತು ಸುಣ್ಣ ಬಳಿಯುವ ಕೆಲಸ ಮುಗಿದ ಒಂದು ವಾರದೊಳಗೆ ಅದನ್ನು ಮರುಪಾವತಿಸಬೇಕು' ಎಂದು ನ್ಯಾಯಾಲಯ ಸೂಚಿಸಿತ್ತು.
ಮಸೀದಿಯ ಹೊರ ಗೋಡೆಗಳಿಗೆ ಸುಣ್ಣ ಬಳಿಯುವುದರಿಂದ ಉಂಟಾಗುವ ಸಂಭಾವ್ಯ ಹಾನಿ ಅಥವಾ ನಕಾರಾತ್ಮಕ ಪರಿಣಾಮ (ಪೂರ್ವಾಗ್ರಹ)ದ ಬಗ್ಗೆ ವಿವರವಾದ ವಿವರಣೆಗಳನ್ನು ಒದಗಿಸುವಂತೆ ಭಾರತೀಯ ಪುರಾತತ್ವ ಇಲಾಖೆಯನ್ನು ಪ್ರತಿನಿಧಿಸುವ ವಕೀಲರಿಗೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು.