ನವದೆಹಲಿ: ನನ್ನ ವಿರುದ್ಧ ಮಾಡಿರುವ 'ಅರಣ್ಯ ಭೂಮಿ ಕಬಳಿಕೆ' ಆರೋಪ ಆಧಾರ ರಹಿತವಾಗಿದ್ದು, ಆರೋಪ ಸಾಬೀತುಪಡಿಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಸವಾಲು ಹಾಕಿದ್ದಾರೆ.
ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮಲ್ಲಿಕಾರ್ಜನ ಖರ್ಗೆಯವರು, ವಕ್ಫ್ ಮಸೂದೆ ಮೇಲಿನೆ ಚರ್ಚೆ ವೇಳೆ ಬಿಜೆಪಿ ಸಂಸದರು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಇದು ಮಾನನಷ್ಟ ಹೇಳಿಕೆಯಾಗಿದೆ. ಈ ಹೇಳಿಕೆ ನೀಡಿರುವ ಅನುರಾಗ್ ಠಾಕೂರ್ ಹಾಗೂ ಜೆಪಿ ನಡ್ಡಾ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಅನುರಾಗ್ ಠಾಕೂರ್ ಅವರು ತಮ್ಮ ಆರೋಪವನ್ನು ಸಾಬೀತುಪಡಿಸಬೇಕು. ಆರೋಪ ಸಾಬೀತಾದರೆ ರಾಜೀನಾಮೆ ನೀಡಲು ನಾನು ಸಿದ್ಧ. ಇಲ್ಲವೇ, ಅವರು ರಾಜೀನಾಮೆ ನೀಡಿ, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಸೂದೆಯು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕಾರಣಕ್ಕೆ ಅಂತ್ಯ ಹಾಡಲಿದೆ ಎಂದು ಹೇಳಿದ್ದರು. ಅಲ್ಲದೆ, ಖರ್ಗೆಯವರ ವಿರುದ್ಧ ಅರಣ್ಯ ಭೂಮಿ ಕಬಳಿಕೆ ಬಗ್ಗೆಯೂ ಆರೋಪ ಮಾಡಿದ್ದರು.