ನವದೆಹಲಿ: ಕಾಂಗ್ರೆಸ್ ಹಾಗೂ ಎಐಎಂಐಎಂ ನಂತರ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರು ವಕ್ಫ್ (ತಿದ್ದುಪಡಿ) ಮಸೂದೆ, 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಖಾನ್ ತಮ್ಮ ಅರ್ಜಿಯಲ್ಲಿ, ವಕ್ಫ್(ತಿದ್ದುಪಡಿ) ಮಸೂದೆ "ಅಸಂವಿಧಾನಿಕ ಮತ್ತು ಸಂವಿಧಾನದ 14, 15, 21, 25, 26, 29, 30 ಮತ್ತು 300-A ವಿಧಿಗಳ ಉಲ್ಲಂಘನೆಯಾಗಿದೆ". ಹೀಗಾಗಿ ಅದನ್ನು ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.
"ಮಸೂದೆಯು ಸಂವಿಧಾನದ 14, 15, 21, 25, 26, 29, 30 ಮತ್ತು 300-A ವಿಧಿಗಳ ಅಡಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ. ಅನಿಯಂತ್ರಿತ ಕಾರ್ಯಾಂಗ ಹಸ್ತಕ್ಷೇಪವನ್ನು ಸಕ್ರಿಯಗೊಳಿಸುತ್ತದೆ ಮತ್ತು ಅವರ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ನಿರ್ವಹಿಸಲು ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ" ಎಂದು ಖಾನ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆ, 2025 ರ ಸಿಂಧುತ್ವವನ್ನು ಪ್ರಶ್ನಿಸಿ ಶುಕ್ರವಾರ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಮತ್ತು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ಮಸೂದೆಯು ವಕ್ಫ್ ಆಸ್ತಿಗಳು ಮತ್ತು ಅವುಗಳ ನಿರ್ವಹಣೆಯ ಮೇಲೆ "ಅನಿಯಂತ್ರಿತ ನಿರ್ಬಂಧಗಳನ್ನು" ವಿಧಿಸಿದೆ ಎಂದು ಜಾವೇದ್ ಅವರ ಅರ್ಜಿಯಲ್ಲಿ ಆರೋಪಿಸಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದ್ದು, ಈ ವಿಧೇಯಕ ಕಾನೂನಾಗಲು ರಾಷ್ಟ್ರಪತಿಗಳ ಸಹಿ ಒಂದೇ ಬಾಕಿ ಇದೆ.