ದ್ವಾರಕ(ಗುಜರಾತ್): ಇದೇ ಏಪ್ರಿಲ್ 10ರಂದು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯವರ 30ನೇ ಜನ್ಮದಿನ. ಈ ಸಂದರ್ಭದಲ್ಲಿ ಅವರು ಗುಜರಾತ್ ರಾಜ್ಯದ ಜಾಮ್ ನಗರ್ ದಿಂದ ದೇಶದ ಅತ್ಯಂತ ಪವಿತ್ರ ಪುರಾತನ ನಗರವಾದ ದ್ವಾರಕದವರೆಗೆ 140 ಕಿಲೋ ಮೀಟರ್ ದೂರ ಪಾದಯಾತ್ರೆ ಕೈಗೊಂಡಿದ್ದರು.
ಮಾರ್ಚ್ 29ರಂದು ಜಾಮ್ ನಗರದಿಂದ ಪಾದಯಾತ್ರೆ ಆರಂಭಿಸಿದ್ದ ಅನಂತ್ ಅಂಬಾನಿ ಪ್ರತಿದಿನ ರಾತ್ರಿ ಹೊತ್ತು 7ರಿಂದ 8 ಗಂಟೆ ನಡೆದುಕೊಂಡು 20 ಕಿಲೋ ಮೀಟರ್ ದೂರ ಕ್ರಮಿಸಿ, ಇಂದು ರಾಮನವಮಿಯ ಪುಣ್ಯದಿನ ಬೆಳಗಿನ ಜಾವ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಸ್ಥಾನಕ್ಕೆ ಆಗಮಿಸಿ 140 ಕಿಲೋ ಮೀಟರ್ ನಡಿಗೆಯನ್ನು ಮುಕ್ತಾಯಗೊಳಿಸಿದರು. ಪಾದಯಾತ್ರೆಯುದ್ದಕ್ಕೂ ಹನುಮಾನ ಚಾಲೀಸ, ಸುಂದರಕಾಂಡ, ದೇವಿ ಸ್ತ್ರೋತ್ರಗಳನ್ನು ಪಠಿಸುತ್ತಾ ಸಾಗಿ ಬಂದಿದ್ದರು. ಭಾರತದ ಸತಾನನ ಶೈಲಿಯಲ್ಲಿ ವೇಷಭೂಷಣಗಳನ್ನು ಧರಿಸಿ ತಮ್ಮ ಹಿತೈಷಿಗಳೊಂದಿಗೆ ಪಾದಯಾತ್ರೆ ಸಾಗಿ ಬಂದದ್ದು ವಿಶೇಷವಾಗಿತ್ತು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅನಂತ್ ಅಂಬಾನಿಯವರು ಅಪರೂಪದ ಅಸ್ತಮಾ, ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಪರೂಪದ ಹಾರ್ಮೋನುಗಳ ಅಸ್ವಸ್ಥತೆ, ಶ್ವಾಸಕೋಶದ ಕಾಯಿಲೆಯಂತಹ ಜೀವಿತಾವಧಿಯ ಕಾಯಿಲೆಯಿಂದ ಬಳಲುತ್ತಿರುವ ಅನಂತ್ ಪಾದಯಾತ್ರೆ ಸಾಗಿ ಬಂದದ್ದು ಹಲವರ ಗಮನ ಸೆಳೆದಿದೆ.
ಅನಂತ್ ಅಂಬಾನಿ ಈ ಪವಿತ್ರ ಹಾದಿಯಲ್ಲಿ ಅನೇಕರು ಅವರಿಗೆ ಸಾಥ್ ನೀಡಿದ್ದರು. ಇಂದು ದ್ವಾರಕಾಧೀಶ್ವರ ದೇವಸ್ಥಾನಕ್ಕೆ ಬರುತ್ತಿದ್ದಂತೆ ಅವರ ಪತ್ನಿ ರಾಧಿಕಾ ಮರ್ಚೆಂಟ್ ಮತ್ತು ತಾಯಿ ನೀತಾ ಅಂಬಾನಿ ಜೊತೆಗೂಡಿಕೊಂಡರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಧಿಕಾ ಮರ್ಚೆಂಟ್, ನಮ್ಮ ಮದುವೆಯ ನಂತರ ಪಾದಯಾತ್ರೆ ಕೈಗೊಳ್ಳಬೇಕೆಂದು ಅನಂತ್ ಬಯಸಿದ್ದರು. ಅವರ ಜನ್ಮದಿನವನ್ನು ದ್ವಾರಕಾದಲ್ಲಿ ಇಂದು ಆಚರಿಸುತ್ತಿರುವುದು ನಮಗೆ ಖುಷಿ ತರುತ್ತಿದೆ. ಅವರ ಪಾದಯಾತ್ರೆ ಯಶಸ್ವಿಯಾಗಲು ಹರಸಿದ ಮತ್ತು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಇದು ನನ್ನ ಆಧ್ಯಾತ್ಮಿಕ ಪ್ರಯಾಣ, ದೇವರ ಹೆಸರು ಹೇಳಿಕೊಂಡು ನನ್ನ ಪಾದಯಾತ್ರೆ ಕೈಗೊಂಡು ದೇವರ ಹೆಸರಿನಲ್ಲಿಯೇ ಮುಕ್ತಾಯಗೊಳಿಸುತ್ತಿದ್ದೇನೆ. ನನ್ನ ಈ ಪಯಣದಲ್ಲಿ ನನ್ನ ಜೊತೆಯಾದ ಪತ್ನಿ, ತಾಯಿ ಮತ್ತು ಎಲ್ಲ ಹಿತೈಷಿಗಳಿಗೂ ಧನ್ಯವಾದಗಳು ಎಂದು ಅನಂತ್ ಅಂಬಾನಿ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನೀತಾ ಅಂಬಾನಿ, ತಾಯಿಯಾಗಿ ನನ್ನ ಕಿರಿಯ ಪುತ್ರ ಅನಂತ್ ಅಂಬಾನಿ ಕೈಗೊಂಡ ಪಾದಯಾತ್ರೆ ಬಗ್ಗೆ ನನಗೆ ಹೆಮ್ಮಯೆನಿಸುತ್ತದೆ. ಕಳೆದ 10 ದಿನಗಳಿಂದ ಪಾದಯಾತ್ರೆ ಮೂಲಕ ನನ್ನ ಪುತ್ರ ಸನಾತನ ಸಂಸ್ಕೃತಿಯನ್ನು ಪಸರಿಸಲು ಪ್ರಯತ್ನಿಸುತ್ತಿದ್ದು ಅವನಿಗೆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.