ಮುಂಬೈ: ಮನುಷ್ಯರ ಹಲ್ಲುಗಳನ್ನು ಗಂಭೀರ ಹಾನಿಯನ್ನುಂಟುಮಾಡುವ ಅಪಾಯಕಾರಿ ಆಯುಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಬಾಂಬೆ ಹೈಕೋರ್ಟ್, ತನ್ನ ನಾದಿನಿ ಕಚ್ಚಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನ ಮೇರೆಗೆ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.
ಹೈಕೋರ್ಟ್‌ನ ಔರಂಗಾಬಾದ್ ಪೀಠದ ನ್ಯಾಯಮೂರ್ತಿಗಳಾದ ವಿಭಾ ಕಂಕನ್ವಾಡಿ ಮತ್ತು ಸಂಜಯ್ ದೇಶಮುಖ್ ಅವರಿದ್ದ ಪೀಠವು, ದೂರುದಾರರು ಸಲ್ಲಿಸಿರುವ ವೈದ್ಯಕೀಯ ಪ್ರಮಾಣಪತ್ರಗಳು ಹಲ್ಲಿನಿಂದ ಉಂಟಾದ ಸರಳ ಗಾಯವನ್ನು ಮಾತ್ರ ತೋರಿಸುತ್ತವೆ ಎಂದು ಏಪ್ರಿಲ್ 4 ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಮಹಿಳೆಯ ದೂರಿನ ಮೇರೆಗೆ 2020ರ ಏಪ್ರಿಲ್‌ನಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಜಗಳದ ಸಮಯದಲ್ಲಿ, ನಾದಿನಿ ಆಕೆಯನ್ನು ಕಚ್ಚಿದ್ದಾರೆ. ಈ ಅಪಾಯಕಾರಿ ಆಯುಧದಿಂದ ತನಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ.
ಆರೋಪಿಗಳ ವಿರುದ್ಧ ಅಪಾಯಕಾರಿ ಆಯುಧಗಳಿಂದ ಹಾನಿ ಉಂಟುಮಾಡುವುದು, ಯಾರನ್ನಾದರೂ ನೋಯಿಸುವುದು ಮತ್ತು ಗಾಯಗೊಳಿಸುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
'ಮನುಷ್ಯರ ಹಲ್ಲುಗಳನ್ನು ಅಪಾಯಕಾರಿ ಆಯುಧ ಎಂದು ಹೇಳಲು ಸಾಧ್ಯವಿಲ್ಲ' ಎಂದ ನ್ಯಾಯಾಲಯ, ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.
ಅಪಾಯಕಾರಿ ಆಯುಧವನ್ನು ಬಳಸಿ ಸಾವು ಅಥವಾ ಗಂಭೀರ ಹಾನಿಯನ್ನುಂಟುಮಾಡುವ ಪ್ರಕರಣವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324ರ ಅಡಿಯಲ್ಲಿ ಬರುತ್ತದೆ. ಸದ್ಯದ ಪ್ರಕರಣದಲ್ಲಿ ದೂರುದಾರರ ವೈದ್ಯಕೀಯ ಪ್ರಮಾಣಪತ್ರಗಳು ಹಲ್ಲಿನ ಗುರುತುಗಳಿಂದ ಉಂಟಾದ ಸರಳ ಗಾಯವನ್ನು ಮಾತ್ರ ತೋರಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 324ರ ಅಡಿಯಲ್ಲಿ ಅಪರಾಧ ಸಾಬೀತಾಗದಿದ್ದಾಗ, ಆರೋಪಿಯನ್ನು ವಿಚಾರಣೆ ಎದುರಿಸುವಂತೆ ಮಾಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಹೀಗಾಗಿ, ಎಫ್‌ಐಆರ್ ರದ್ದುಗೊಳಿಸಲಾಗಿದೆ. ಆರೋಪಿ ಮತ್ತು ದೂರುದಾರರ ನಡುವೆ ಆಸ್ತಿ ವಿವಾದ ಇರುವಂತೆ ಕಂಡುಬರುತ್ತಿದೆ ಎಂದು ನ್ಯಾಯಾಲಯ ಹೇಳಿದೆ.