ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿದ ನಂತರ ಇಂದು ಭಾರತಕ್ಕೆ ಕರೆತಂದು ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆಯಿರುವುದರಿಂದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ಯಾರಾಮಿಲಿಟರಿ ಪಡೆಗಳು ಮತ್ತು ದೆಹಲಿ ಪೊಲೀಸರ ಸಿಬ್ಬಂದಿಯನ್ನು ನ್ಯಾಯಾಲಯದ ಹೊರಗೆ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂದರ್ಶಕರ ಸಂಪೂರ್ಣ ದೈಹಿಕ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎನ್‌ಐಎ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ. ಈ ಮಧ್ಯೆ, ರಾಣಾನನ್ನು ಹೆಚ್ಚಿನ ಭದ್ರತೆಯ ಜೈಲು ವಾರ್ಡ್‌ನಲ್ಲಿ ಇರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ ಆರ್ ಸಿ-04/2009/ಎನ್ ಐಎ/ಡಿಎಲ್ ಐ ಮುಂಬೈ ದಾಳಿಗೆ ಸಂಬಂಧಿಸಿದ ವಿಚಾರಣೆ ಮತ್ತು ಇತರ ವಿಷಯಗಳಿಗೆ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಕೇಂದ್ರವು ವಕೀಲ ನರೇಂದ್ರ ಮಾನ್ ಅವರನ್ನು ಮೂರು ವರ್ಷಗಳ ಕಾಲ ನೇಮಿಸಿದೆ.
2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ರಾಣಾನನ್ನು ಅಮೆರಿಕದಿಂದ ದೆಹಲಿಗೆ ಕರೆತರಲಾಗುತ್ತಿದೆ. 64 ವರ್ಷದ ರಾಣಾ, ಪಾಕಿಸ್ತಾನದಲ್ಲಿ ಜನಿಸಿದ ಕೆನಡಾದ ಪ್ರಜೆಯಾಗಿದ್ದು, 2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟವರ್ತಿಯಾಗಿದ್ದಾನೆ.
ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆತನ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಗಡಿಪಾರುಗೊಂಡು ಭಾರತಕ್ಕೆ ಕರೆತರಲಾಗುತ್ತಿದೆ.