ಚೆನ್ನೈ: ಹಿಂದೂ ಧರ್ಮ, ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ತಮಿಳುನಾಡು ಸಚಿವ ಕೆ. ಪೊನ್ಮುಡಿ ಅವರನ್ನು ಶುಕ್ರವಾರ ಪಕ್ಷದ ಪ್ರಮುಖ ಹುದ್ದೆಯಿಂದ ತೆಗೆದುಹಾಕಲಾಗಿದೆ.
ಈ ಬಗ್ಗೆ ಸ್ವತಃ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘೋಷಣೆ ಮಾಡಿದ್ದು, 'ಪೊನ್ಮುಡಿ ಅವರನ್ನು "ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಅವರ ವಿರುದ್ಧದ ಕ್ರಮಕ್ಕೆ ಸ್ಟಾಲಿನ್ ಯಾವುದೇ ಕಾರಣ ನೀಡಿಲ್ಲ ಎಂದು ಹೇಳಲಾಗಿದೆ.
ಡಿಎಂಕೆ ಸಚಿವ ಪೊನ್ಮುಡಿ ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಲೈಂಗಿಕ ಭಂಗಿಗಳೊಂದಿಗೆ ಹೋಲಿಕೆ ಮಾಡಿದ್ದರು. ಶೈವ ಮತ್ತು ವೈಷ್ಣವ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಮಾತ್ರವಲ್ಲದೇ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತೋರಿಸುವ ಸಾರ್ವಜನಿಕ ಕಾರ್ಯಕ್ರಮವೊಂದರ ವೀಡಿಯೊ ವೈರಲ್ ಆಗಿತ್ತು.
ಈ ವಿಡಿಯೋಗೆ ವಿಪಕ್ಷಗಳು ಮಾತ್ರವಲ್ಲದೇ ಡಿಎಂಕೆ ಪಕ್ಷದ ಮಹಿಳಾ ನಾಯಕರೇ ತೀವ್ರ ಕಿಡಿಕಾರಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿಎಂಕೆ ನಾಯಕಿ ಕನ್ನಿಮೋಳಿ, 'ಸಚಿವ ಪೊನ್ಮುಡಿ ಅವರ ಇತ್ತೀಚಿನ ಹೇಳಿಕೆ ಸ್ವೀಕಾರಾರ್ಹವಲ್ಲ. ಪೊನ್ಮುಡಿ ಯಾವುದೇ ಕಾರಣಕ್ಕಾಗಿ ಮಾತನಾಡಿದ್ದರೂ, ಅಂತಹ ಅಸಭ್ಯ ಪದಗಳು ಖಂಡನೀಯ ಎಂದು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಅಂತೆಯೇ ಸಚಿವ ಪೊನ್ಮುಡಿ ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ನಾಚಿಕೆಗೇಡಿನ ಸಂಗತಿ.. ಸಿಎಂ ಸ್ಟಾಲಿನ್, ಪೊನ್ಮುಡಿ ಅವರ ಬಂಧನಕ್ಕೆ ಆದೇಶಿಸುತ್ತೀರಾ? ಎಂದು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ. ಪೊನ್ಮುಡಿ ತಮ್ಮ ಹೇಳಿಕೆ ಮೂಲಕ ತಮಿಳುನಾಡಿನ ಮಹಿಳೆಯರನ್ನು ನಿಂದಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಪೊನ್ಮುಡಿ ವಿವಾದ ಮೊದಲೇನಲ್ಲ...
ಇನ್ನು ಡಿಎಂಕೆ ನಾಯಕ ಪೊನ್ಮುಡಿ ವಿವಾದಾತ್ಮ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲಲ್ಲ.. ಈ ಹಿಂದೆ ಇದೇ ಪೊನ್ಮುಡಿ ಉತ್ತರ ಭಾರತೀಯರನ್ನು ಪಾನಿ ಪುರಿ ಮಾರಾಟಗಾರರು ಎಂದು ಟೀಕಿಸಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಅಂತೆಯೇ ಹಿಂದಿ ಕಲಿಯುವವರಿಗೆ ಉದ್ಯೋಗ ಲಭ್ಯವಾಗುತ್ತದೆ ಎಂದು ಒತ್ತಾಯಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಈಗ ನಗರದಲ್ಲಿ (ಕೊಯಮತ್ತೂರು) ಪಾನಿ ಪುರಿ ಮಾರಾಟ ಮಾಡುವವರು ಯಾರು? ವ್ಯಂಗ್ಯ ಮಾಡಿದ್ದರು.