ನವದೆಹಲಿ: ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ "ವೋಟ್ ಬ್ಯಾಂಕ್ ನ ವೈರಸ್" ನ್ನು ಹರಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದ್ದಾರೆ. ವಿರೋಧ ಪಕ್ಷ ಎಸ್‌ಸಿ ಮತ್ತು ಎಸ್‌ಟಿ ಸಮುದಾಯವನ್ನು "ಎರಡನೇ ದರ್ಜೆಯ ನಾಗರಿಕರು" ಎಂದು ಪರಿಗಣಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ.
"ಕಾಂಗ್ರೆಸ್ ಸಂವಿಧಾನದ ವಿಧ್ವಂಸಕವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಸಮಾನತೆಯನ್ನು ತರಲು ಬಯಸಿದ್ದರು, ಆದರೆ ಕಾಂಗ್ರೆಸ್ ಮತ ಬ್ಯಾಂಕ್ ರಾಜಕೀಯದ ವೈರಸ್ ನ್ನು ಹರಡಿತು. ಬಾಬಾಸಾಹೇಬ್ ಪ್ರತಿಯೊಬ್ಬ ಬಡವರು, ಹಿಂದುಳಿದವರು ಘನತೆಯಿಂದ ಮತ್ತು ತಲೆ ಎತ್ತಿ ಬದುಕಲು ಸಾಧ್ಯವಾಗುತ್ತದೆ, ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಬಯಸಿದ್ದರು" ಎಂದು ಹಿಸಾರ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.
"ಕಾಂಗ್ರೆಸ್ ಕಾಲದಲ್ಲಿ, ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಬ್ಯಾಂಕಿನ ಬಾಗಿಲುಗಳು ತೆರೆದಿರಲಿಲ್ಲ; ಸಾಲ, ಕಲ್ಯಾಣ ಕಾರ್ಯಕ್ರಮಗಳು ಎಲ್ಲವೂ ಕೇವಲ ಕನಸಾಗಿತ್ತು, ಆದರೆ ಈಗ ಜನ ಧನ್ ಖಾತೆಗಳ ದೊಡ್ಡ ಫಲಾನುಭವಿಗಳು ಎಸ್‌ಸಿ, ಎಸ್‌ಟಿ ಸಹೋದರ ಸಹೋದರಿಯರು" ಎಂದು ಮೋದಿ ಹೇಳಿದ್ದಾರೆ.
ವಕ್ಫ್ ಮಂಡಳಿಯ ಅಡಿಯಲ್ಲಿ "ಲಕ್ಷ ಹೆಕ್ಟೇರ್ ಭೂಮಿ" ಇದೆ, ಆದರೆ ಈ ಆಸ್ತಿಗಳನ್ನು ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಸರಿಯಾಗಿ ಬಳಸಲಾಗಿಲ್ಲ ಎಂದು ಅವರು ಹೇಳಿದರು.
"ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಇದೆ. ವಕ್ಫ್ ಆಸ್ತಿಗಳ ಪ್ರಯೋಜನಗಳನ್ನು ಅಗತ್ಯವಿರುವವರಿಗೆ ನೀಡಿದ್ದರೆ, ಅದು ಅವರಿಗೆ ಪ್ರಯೋಜನವಾಗುತ್ತಿತ್ತು. ಆದರೆ ಭೂ ಮಾಫಿಯಾ ಈ ಆಸ್ತಿಗಳಿಂದ ಲಾಭ ಪಡೆದಿದೆ" ಎಂದು ಪ್ರಧಾನಿ ಹೇಳಿದ್ದಾರೆ.
ಮುಸ್ಲಿಂ ಮೀಸಲಾತಿಗೆ ಮೋದಿ ಕೆಂಡ!
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಧರ್ಮದ ಆಧಾರದ ಮೇಲೆ ಟೆಂಡರ್‌ಗಳಲ್ಲಿ ಮೀಸಲಾತಿ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಕ್ರಮವು "ಪರಿಶಿಷ್ಟ ಜಾತಿಗಳು (SCs), ಪರಿಶಿಷ್ಟ ಪಂಗಡಗಳು (STs) ಮತ್ತು ಇತರ ಹಿಂದುಳಿದ ವರ್ಗಗಳ (OBCs) ಹಕ್ಕುಗಳನ್ನು ಕಸಿದುಕೊಳ್ಳುತ್ತದೆ" ಎಂದು ಆರೋಪಿಸಿದ್ದಾರೆ.
ಇಂತಹ ನಿಬಂಧನೆಗಳು ಸಂವಿಧಾನಬಾಹಿರ ಮಾತ್ರವಲ್ಲದೆ ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಿಗೆ ದ್ರೋಹವಾಗಿದೆ ಎಂದು ಮೋದಿ ಕಿಡಿಕಾರಿದ್ದಾರೆ.
"ಅಂಬೇಡ್ಕರ್ ಧರ್ಮದ ಆಧಾರದ ಮೇಲೆ ಮೀಸಲಾತಿ ಇರುವುದಿಲ್ಲ ಎಂದು ಹೇಳಿದ್ದರು, ಮತ್ತು ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕೆ ನಿರ್ಬಂಧವಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಮೋದಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರದ ಮೀಸಲಾತಿ ನೀತಿಯನ್ನು ಸಮರ್ಥಿಸಿಕೊಂಡರು. "ನಾವು ಎಸ್‌ಸಿ/ಎಸ್‌ಟಿಗಳಿಗೂ ಮೀಸಲಾತಿ ನೀಡುತ್ತಿದ್ದೇವೆ. ಆರ್ಥಿಕವಾಗಿ ಸ್ಥಿರವಾಗಿಲ್ಲದವರನ್ನು ಉನ್ನತೀಕರಿಸುವುದು ನಮ್ಮ ಗುರಿಯಾಗಿದೆ; ಅವರು ಮುಖ್ಯವಾಹಿನಿಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ. ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗವನ್ನು ಸಮಾನವಾಗಿ ನೋಡುತ್ತದೆ" ಎಂದು ಅವರು ಹೇಳಿದ್ದಾರೆ.