ನವದೆಹಲಿ: ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ ಭವನವನ್ನು ಮುಚ್ಚಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತು X ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ದುಬೆ, ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ ಭವನವನ್ನು ಮುಚ್ಚಬೇಕು ಎಂದು ಬರೆದಿದ್ದರು.
ನಂತರ ANI ಜೊತೆ ಮಾತನಾಡಿದ ದುಬೆ, ದೇಶದಲ್ಲಿ ಧಾರ್ಮಿಕ ಸಂಘರ್ಷಗಳನ್ನು ಪ್ರಚೋದಿಸಲು ಸುಪ್ರೀಂ ಕೋರ್ಟ್ ಕಾರಣವಾಗಿದೆ ಎಂದು ನ್ಯಾಯಾಂಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"... ದೇಶದಲ್ಲಿ ಧಾರ್ಮಿಕ ಯುದ್ಧಗಳನ್ನು ಪ್ರಚೋದಿಸಲು ಸುಪ್ರೀಂ ಕೋರ್ಟ್ ಹೊಣೆಯಾಗಿದೆ. ಸುಪ್ರೀಂ ಕೋರ್ಟ್ ತನ್ನ ಮಿತಿಗಳನ್ನು ಮೀರುತ್ತಿದೆ. ಪ್ರತಿಯೊಂದಕ್ಕೂ ಸುಪ್ರೀಂ ಕೋರ್ಟ್‌ಗೆ ಹೋಗುವುದಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯನ್ನು ಮುಚ್ಚಬೇಕು...." ಎಂದು ಬಿಜೆಪಿ ಹೇಳಿದ್ದಾರೆ.
"ಈ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಅಂತರ್ಯುದ್ಧಗಳಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರೇ ಹೊಣೆ" ಎಂದು ಅವರು ಮುರ್ಷಿದಾಬಾದ್ ಹಿಂಸಾಚಾರದ ಕುರಿತ ಪ್ರಶ್ನೆಗೆ ಬಿಜೆಪಿ ನಾಯಕ ಉತ್ತರಿಸಿದರು.
ಇನ್ನು ದುಬೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್, "ಇದು ಸುಪ್ರೀಂ ಕೋರ್ಟ್ ವಿರುದ್ಧದ ಮಾನಹಾನಿ ಹೇಳಿಕೆಯಾಗಿದೆ. ನಿಶಿಕಾಂತ್ ದುಬೆ ಇತರ ಎಲ್ಲ ಸಂಸ್ಥೆಗಳನ್ನು ನಿರಂತರವಾಗಿ ಕೆಡವುವ ವ್ಯಕ್ತಿ. ಈಗ, ಅವರು ಸುಪ್ರೀಂ ಕೋರ್ಟ್ ಮೇಲೆ ದಾಳಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ಸಂಸತ್ತಿನಲ್ಲಿ ಮಾತನಾಡುತ್ತಿಲ್ಲ. ಸಂಸತ್ತಿನ ಹೊರಗೆ ಮಾತನಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮೇಲಿನ ಅವರ ದಾಳಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
ಈ ತಿಂಗಳ ಮೊದಲ ವಾರದಲ್ಲಿ ಸಂಸತ್ತು ಅಂಗೀಕರಿಸಿದ ವಕ್ಫ್(ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಜಾರ್ಖಂಡ್ ನ ಗೊಡ್ಡಾ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಈ ಹೇಳಿಕೆ ಹೊರಬಿದ್ದಿದೆ.
ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ತಮಗೆ ಕಳುಹಿಸಲಾದ ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಇತ್ತೀಚಿಗೆ ಕಾಲಮಿತಿ ನಿಗದಿಪಡಿಸಿದ್ದು, ಇದಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತೀರ್ಪಿನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.