ಭಯೋತ್ಪಾದಕ ದಾಳಿ ನಂತರ ಪಹಲ್ಗಾಮ್ ನ ಮರುಭೂಮಿ ನೋಟ  
ದೇಶ

ಪ್ರವಾಸಿಗರಿಂದ ತುಂಬಿತುಳುಕುತ್ತಿದ್ದ ಪಹಲ್ಗಾಮ್ ನಲ್ಲಿ ಈಗ ನೀರವ ಮೌನ; ಹೊಟೇಲ್, ಡಾಬ್ಬಾವಾಲಾಗಳ ಭವಿಷ್ಯ ಕರಾಳ...

ಬಹು ಬೇಡಿಕೆಯ ಪ್ರವಾಸಿ ತಾಣವಾದ ಪಹಲ್ಗಾಮ್ ಭೂತ ಪಟ್ಟಣದಂತೆ ಕಾಣುತ್ತಿದೆ. ಪ್ರವಾಸಿಗರಿಂದ ತುಂಬಿರುತ್ತಿದ್ದ ಎಲ್ಲಾ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿದ್ದವು.

ಶ್ರೀನಗರ: ಪ್ರವಾಸಿಗರು ಮತ್ತು ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದ್ದ ಜಮ್ಮು-ಕಾಶ್ಮೀರದ ನೆಚ್ಚಿನ ಪಹಲ್ಗಾಮ್ ಪ್ರವಾಸಿ ತಾಣ ಕಳೆದ ಮಂಗಳವಾರ ನಡೆದ ಭಯೋತ್ಪಾದಕ ದಾಳಿಗೆ ಅಕ್ಷರಶಃ ನಲುಗಿ ಹೋಗಿದೆ. ಸ್ಥಳೀಯರೊಬ್ಬರು ಸೇರಿದಂತೆ ಕನಿಷ್ಠ 26 ಜನರು ಮೃತಪಟ್ಟು ಭೂಲೋಕದ ಸ್ವರ್ಗದಂತಿದ್ದ ಪ್ರದೇಶ ಈಗ ನೀರವ ಮೌನವಾಗಿದೆ.

ಇಲ್ಲಿ ಯಾವಾಗಲೂ ಪ್ರವಾಸಿಗರು ತುಂಬಿತುಳುಕುತ್ತಿದ್ದರಿಂದ ಊಟ ಮತ್ತು ಇತರ ತಿಂಡಿ ತಿನಿಸುಗಳ ಹೊಟೇಲ್ ಮಾಲೀಕರಿಗೆ, ಡಬ್ಬಾವಾಲಾಗಳಿಗೆ ಬಿಡುವಿಲ್ಲದ ಕೆಲಸವಿತ್ತು. ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಪ್ರವಾಸಿಗರಿಲ್ಲದೆ ಬಣಗುಡುತ್ತಿದ್ದು, ಹೊಟೇಲ್, ಡಬ್ಬಾವಾಲಾಗಳ ಭವಿಷ್ಯ ಕತ್ತಲೆಯಲ್ಲಿದೆ.

ಬಹು ಬೇಡಿಕೆಯ ಪ್ರವಾಸಿ ತಾಣವಾದ ಪಹಲ್ಗಾಮ್ ಭೂತದ ಪಟ್ಟಣದಂತೆ ಕಾಣುತ್ತಿತ್ತು, ಭದ್ರತಾ ಪಡೆಗಳ ಚಲನೆ ಮತ್ತು ಸಾಂದರ್ಭಿಕವಾಗಿ ಖಾಸಗಿ ವಾಹನಗಳು ಮತ್ತು ಕ್ಯಾಬ್‌ಗಳ ಓಡಾಟ ಮಾತ್ರ ಕಾಣುತ್ತಿದೆ. ಎಲ್ಲಾ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿವೆ.

ಪಹಲ್ಗಾಮ್‌ನಲ್ಲಿರುವ ದಾಲ್ ರೋಟಿ ತಿನಿಸು ಅಂಗಡಿಯ ಮಾಲೀಕ ಸಬ್ಜರ್ ಅಹ್ಮದ್, ಬುಧವಾರದಿಂದ ಪ್ರವಾಸಿಗರಿಲ್ಲದ ಕಾರಣ ತಮ್ಮ ತಿನಿಸು ಅಂಗಡಿಯನ್ನು ತೆರೆದಿಲ್ಲ ಎಂದು ಹೇಳಿದರು. ಪಹಲ್ಗಾಮ್‌ನಲ್ಲಿರುವ ಎಲ್ಲಾ ಪ್ರವಾಸಿಗರು ಹೊರಟುಹೋಗಿದ್ದಾರೆ. ಕೆಲವರು ಇದ್ದರೂ ಸಹ, ಅವರು ಹೋಟೆಲ್‌ಗಳಲ್ಲಿ ತಂಗಿದ್ದಾರೆ, ಹೊರಬರುವುದು ಕಷ್ಟವಾಗಿದೆ ಎಂದರು.

ಭಯೋತ್ಪಾದಕ ದಾಳಿಯ ನಂತರ, ಪಹಲ್ಗಾಮ್‌ನಲ್ಲಿರುವ ಹೋಟೆಲ್ ಮಾಲೀಕರು ಮತ್ತು ತಿನಿಸು ಅಂಗಡಿಗಳು ಪ್ರವಾಸಿಗರಿಗೆ ರಿಯಾಯಿತಿಗಳನ್ನು ನೀಡುತ್ತಿದ್ದರೂ ಯಾರೂ ಬರುತ್ತಿಲ್ಲ ಎಂದು ಸಬ್ಜರ್ ಹೇಳಿದರು. ದಾಳಿಯ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈ ಸ್ಥಳ ಪಹಲ್ಗಾಮ್ ಚಟುವಟಿಕೆಗಳಿಂದ ತುಂಬಿತುಳುಕುತ್ತಿತ್ತು. ಪ್ರವಾಸಿಗರಿಂದ ಗಿಜಿಗುಡುತ್ತಿತ್ತು, ಆದರೆ ಈಗ ಅದು ನಿರ್ಜನವಾಗಿದೆ ಎನ್ನುತ್ತಾರೆ.

ಪ್ರವಾಸಿಗರ ನಿರಂತರ ದಟ್ಟಣೆಯಿಂದಾಗಿ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿ ಊಟ ಮಾಡಲು ಸಮಯವಿರಲಿಲ್ಲ. ಜನದಟ್ಟಣೆಯಿಂದಾಗಿ, ಟೇಬಲ್‌ಗಳನ್ನು ಕಾಯ್ದಿರಿಸಲಾಗುತ್ತಿತ್ತು. ಪ್ರವಾಸಿಗರು ತಮ್ಮ ಸರದಿಗಾಗಿ ಕಾಯಬೇಕಾಯಿತು, ಆದರೆ ಈಗ ಖಾಲಿಯಾಗಿದೆ, ಹೋಟೆಲ್ ಉದ್ಯಮಿಗಳು, ತಿನಿಸು ಮಾಲೀಕರು, ಪೋನಿವಾಲಾಗಳು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲಾ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟವರು ಕರಾಳ ಭವಿಷ್ಯವನ್ನು ನೋಡುತ್ತಿದ್ದಾರೆ ಎಂದು ಸಬ್ಜರ್ ಹೇಳಿದರು.

ಮತ್ತೊಬ್ಬ ಹೋಟೆಲ್ ಉದ್ಯಮಿ ಉಮರ್ ಅಹ್ಮದ್, ಪ್ರವಾಸೋದ್ಯಮ ಋತುವು ಬಹುತೇಕ ಮುಗಿದಿದೆ ಎಂದು ಹೇಳಿದರು. ಭಯಭೀತ ಪ್ರವಾಸಿಗರು ಪಹಲ್ಗಾಮ್ ತೊರೆದಿದ್ದಾರೆ, ಹೊಸ ಪ್ರವಾಸಿಗರು ಯಾರೂ ಬರುತ್ತಿಲ್ಲ. ಮಿನಿ-ಸ್ವಿಟ್ಜರ್ಲೆಂಡ್ ಎಂದೂ ಕರೆಯಲ್ಪಡುವ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪ್ರವಾಸಿಗರು ಭಯಭೀತರಾಗಿದ್ದರು. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕಣಿವೆಯಿಂದ ಹೊರಡಲು ಪ್ರವಾಸಿಗರು ಸಾಲು ಸಾಲು ಇದ್ದಾರೆ ಎಂದರು.

ಪಹಲ್ಗಾಮ್ ಪಟ್ಟಣದ ನೀರವ ನೋಟ

ಮಂಗಳವಾರದ ಭಯೋತ್ಪಾದಕ ದಾಳಿಯ ನಂತರ ಎಲ್ಲಾ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ. ಪ್ರವಾಸೋದ್ಯಮ ಋತುವು ಇದೀಗ ಕೊನೆಗೊಂಡಿದೆ ಎಂದು ಪ್ರಯಾಣ ನಿರ್ವಾಹಕ ಸಜಾದ್ ಅಹ್ಮದ್ ಹೇಳಿದರು.

ಕುದುರೆ ಸವಾರಿ ಮಾಡುವ ಮೂಲಕ, ಪ್ರವಾಸಿಗರಿಗೆ ಕಾಶ್ಮೀರಿ ಕರಕುಶಲ ವಸ್ತುಗಳು ಮತ್ತು ಶಾಲುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಬಡ ದೈನಂದಿನ ಕೂಲಿ ಕಾರ್ಮಿಕರಿಗೆ, ಈ ದುರಂತವು ಅವರ ಜೀವನೋಪಾಯದ ಮೇಲೆ ಅನಿಶ್ಚಿತತೆಯ ಮೋಡಗಳನ್ನು ಕವಿದಿದೆ. ಕಳೆದ ಕೆಲವು ವರ್ಷಗಳಿಂದ ಕಾಶ್ಮೀರವು ಪ್ರವಾಸಿಗರ ಒಳಹರಿವಿನಲ್ಲಿ ಏರಿಕೆ ಕಂಡಿತ್ತು. ವಿದೇಶಿ ಪ್ರವಾಸಿಗರು ಸೇರಿದಂತೆ ಕನಿಷ್ಠ 8.25 ಲಕ್ಷ ಜನರು ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನಕ್ಕೆ ಭೇಟಿ ನೀಡುತ್ತಿದ್ದರು.

ಭಯೋತ್ಪಾದಕ ದಾಳಿಯು ಕಣಿವೆಯ ಪ್ರವಾಸೋದ್ಯಮಕ್ಕೆ ಮಾರಕ ಹೊಡೆತ ನೀಡಿದೆ ಎಂದು ಸಜಾದ್ ಹೇಳುತ್ತಾರೆ. ದೇಶದ ವಿವಿಧ ಭಾಗಗಳ ಜನರ ವಿಶ್ವಾಸವನ್ನು ಮತ್ತೆ ಗಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಈ ಕ್ಷಣದಲ್ಲಿ ಪ್ರವಾಸಿಗರು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ, ಇಲ್ಲಿಂದ ಹೊರಡುತ್ತಿದ್ದಾರೆ. ಸರ್ಕಾರದ ಪ್ರಯತ್ನಗಳೊಂದಿಗೆ ಪ್ರವಾಸಿಗರು ಕಾಶ್ಮೀರಕ್ಕೆ ಹಿಂತಿರುಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಟ್ರಾವೆಲ್ ಏಜೆಂಟರೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT