ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ, ಉಗ್ರರನ್ನು ಸೆದೆಬಡಿಯುವ ಕೆಲಸದಲ್ಲಿ ಭಾರತೀಯ ಸೇನೆ ನಿರತವಾಗಿದೆ. ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಬೆಳಗ್ಗೆ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಹೊಡೆದುರುಳಿಸಲಾಗಿದೆ.
ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕ ಮೇರೆಗೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಡಿಪೋರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಭಯೋತ್ಪಾದಕರು ಇರುವ ಜಾಗವನ್ನು ಪತ್ತೆಹಚ್ಚಲಾಯಿತು. ಬಳಿಕ ಗುಂಡಿನ ಚಕಮಕಿ ನಡೆದು, ಎಲ್‌ಇಟಿ ಕಮಾಂಡರ್ನ್ನು ಹೊಡೆದುರುಳಿಸಲಾಯಿತು.
ಇದೇ ವೇಳೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶ್ರೀನಗರಕ್ಕೆ ಆಗಮಿಸಿದ್ದಾರೆ. ಬಂಡಿಪೋರಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿಯ ಸಮಗ್ರ ಭದ್ರತಾ ಪರಿಶೀಲನೆ ನಡೆಸುತ್ತಿದ್ದಾರೆ.
ಭಯೋತ್ಪಾದಕರು ಅಲ್ಲಿ ಅಡಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ಸೇನೆ ಅಲ್ಲಿಗೆ ತೆರಳಿತ್ತು. ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಡಿಪೋರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಮೊದಲು ಉಗ್ರರು ಸೇನೆಯ ಮೇಲೆ ಗುಂಡು ಹಾರಿಸಿದ್ದರು.
ಅದಕ್ಕೆ ಪ್ರತಿಯಾಗಿ ಸೇನೆಯು ಕೂಡ ದಾಳಿ ನಡೆಸಿತು. ಭದ್ರತಾ ಪಡೆಗಳು ಬೆನ್ನಟ್ಟುತ್ತಿದ್ದ ಭಯೋತ್ಪಾದಕರಲ್ಲಿ ಒಬ್ಬನಿಗೆ ಆರಂಭಿಕ ಗುಂಡಿನ ಚಕಮಕಿಯಲ್ಲಿ ಗಾಯಗಳಾಗಿವೆ ಎಂದು ವರದಿಯಾಗಿತ್ತು.
ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.