ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತೀಯ ಸೇನೆಯ ಉತ್ತರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ಅವರನ್ನು ಹುದ್ದೆಯಿಂದ 'ತೆಗೆದುಹಾಕಲಾಗಿದೆ' ಎಂದು "ಹಲವು ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮ ಖಾತೆಗಳು" ಪೋಸ್ಟ್ ಮಾಡಿದ್ದು, ಇದು ಫೇಕ್ ಎಂದು ಕೇಂದ್ರ ಸರ್ಕಾರದ PIB ಬುಧವಾರ ಸ್ಪಷ್ಟಪಡಿಸಿದೆ.
ಜನರಲ್ ಸುಚೀಂದ್ರ ಕುಮಾರ್ ಅವರನ್ನು ತೆಗೆದು ಹಾಕಲಾಗಿಲ್ಲ. ಅವರು ಏಪ್ರಿಲ್ 30 ರಂದು ನಿವೃತ್ತರಾಗುತ್ತಿದ್ದಾರೆ. ಅವರನ್ನು ತೆಗೆದು ಹಾಕಲಾಗಿದೆ ಎಂಬ ಪೋಸ್ಟ್‌ಗಳು ನಕಲಿ" ಎಂದು PIB ಫ್ಯಾಕ್ಟ್ ಚೆಕ್ X ನಲ್ಲಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಹೆಚ್ಚಿದ ಉದ್ವಿಗ್ನತೆಯ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ದಾರಿತಪ್ಪಿಸುವ ಪೋಸ್ಟ್‌ಗಳು ಹರಿದಾಡುತ್ತಿವೆ.
ಲೆಫ್ಟಿನೆಂಟ್ ಜನರಲ್ ಕುಮಾರ್ ಫೆಬ್ರವರಿ 2024 ರಲ್ಲಿ ಭಾರತೀಯ ಸೇನೆಯ ಉಧಂಪುರ ಮೂಲದ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಆಗಿ ಅಧಿಕಾರ ವಹಿಸಿಕೊಂಡಿದ್ದರು.
"ಪಹಲ್ಗಾಮ್ ಘಟನೆಯ ನಂತರ ಉತ್ತರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸುಚೀಂದ್ರ ಕುಮಾರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಹಲವಾರು ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮ ಖಾತೆಗಳು ತಪ್ಪಾಗಿ ಹೇಳಿಕೊಳ್ಳುತ್ತಿವೆ #PIBFactCheck ಈ ಪೋಸ್ಟ್‌ಗಳಲ್ಲಿ ನೀಡಿರುವ ಮಾಹಿತಿ ತಪ್ಪು #ನಕಲಿ" ಎಂದು ಪಿಐಬಿ ತಿಳಿಸಿದೆ.
ಲೆಫ್ಟಿನೆಂಟ್ ಜನರಲ್ ಕುಮಾರ್ ಅವರು ಏಪ್ರಿಲ್ 30 ರಂದು ನಿವೃತ್ತರಾಗುತ್ತಿದ್ದು, ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಅವರನ್ನು ಹೊಸ ಉತ್ತರ ಸೇನಾ ಕಮಾಂಡರ್ ಆಗಿ ನೇಮಿಸಲಾಗುವುದು ಎಂದು ಪಿಐಬಿ ಹೇಳಿದೆ.