ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮಹಾ ಅವಾಂತರ ಸೃಷ್ಟಿ ಮಾಡಿದ್ದು, ಪ್ರವಾಹದ ರಭಸದ ಹೊಡೆತಕ್ಕೆ ಡ್ಯಾಂ ಒಂದು ಕುಸಿದಿದೆ.
ಹೌದು.. ಭಾರೀ ಮಳೆಯಿಂದ (Rain) ನೀರಿನ ಮಟ್ಟ ದಿಢೀರ್ ಏರಿಕೆಯಾದ ಪರಿಣಾಮ ಹಿಮಾಚಲ ಪ್ರದೇಶದ (Himachal Pradesh) ಕುಲ್ಲು ಜಿಲ್ಲೆಯ ಮಲಾನಾ-I ಜಲವಿದ್ಯುತ್ ಯೋಜನೆಯ ಕಾಫರ್ ಅಣೆಕಟ್ಟು (Cofferdam Collapses) ಕುಸಿದಿದೆ.
ಡ್ಯಾಂ ಕುಸಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಡ್ಯಾಂ ಕುಸಿತದಿಂದ ಕೆಳಗಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ನೀರಿನ ರಭಸಕ್ಕೆ ರಸ್ತೆ ಮೇಲೆ ನಿಂತಿದ್ದ ಕ್ರೇನ್, ಟ್ರಕ್, ರಾಕ್ ಬ್ರೇಕರ್ ಮತ್ತು ಕಾರು ಸೇರಿದಂತೆ ಅಣೆಕಟ್ಟು ಬಳಿ ಇದ್ದ ಭಾರೀ ಯಂತ್ರೋಪಕರಣಗಳು ಕೊಚ್ಚಿ ಹೋಗಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.
ಭಾರಿಮಳೆ, ನಿರಂತರ ಭೂಕುಸಿತ
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಪರಿಣಾಮ ಭೂ ಕುಸಿತ ಕೂಡ ಸಾಮಾನ್ಯವಾಗಿದೆ. ನಿರಂತರ ಮಳೆಯಿಂದಾಗಿ ಭುಂತರ್ ಬಳಿ ಬಿಯಾಸ್ ನದಿಯೊಂದಿಗೆ ವಿಲೀನಗೊಳ್ಳುವ ಪಾರ್ವತಿ ನದಿಯ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ. ಇದರಿಂದ ಆನೆಕಟ್ಟಿಗೆ ಬರುವ ಒಳಹರಿವು ಹೆಚ್ಚಾಗಿ, ಡ್ಯಾಂ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪಾಂಡೋಹ್ ಅಣೆಕಟ್ಟಿನ ಬಳಿ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಪರಿಣಾಮ ಈ ಮಾರ್ಗದಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಗಳು ಹಾನಿಗೊಳಗಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗಳಲ್ಲಿ ವಿಳಂಬವಾಗುತ್ತಿದೆ.
ರಾಜ್ಯದಲ್ಲಿ ಭಾರೀ ಮಳೆಯಿಂದ ಇಲ್ಲಿಯವರೆಗೆ 383 ರಸ್ತೆಗಳಿಗೆ ಹಾನಿಯಾಗಿದೆ. 747 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಇನ್ನೂ ಮಳೆ ಸಂಬಂಧಿತ ಅವಘಡ ಹಾಗೂ ಅಪಘಾತದಲ್ಲಿ ಈ ವಷ 173 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಹೆದ್ದಾರಿಯ 50 ಮೀಟರ್‌ಗಿಂತಲೂ ಹೆಚ್ಚು ಭಾಗ ಕುಸಿದಿದೆ. ನಿರಂತರ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ ಎಂದು ನಂಬಲಾಗಿದೆ. ಮಂಡಿ-ಕುಲ್ಲು ಮಾರ್ಗದಲ್ಲಿ ಪಾಂಡೋಹ್ ಅಣೆಕಟ್ಟು ಮತ್ತು ಬಾಗ್ಲಮುಖಿ ರೋಪ್‌ವೇ ನಡುವಿನ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವು ಪ್ರಮುಖ ರಸ್ತೆ ಗುಂಡಿಯಿಂದಾಗಿ ಕುಸಿದಿದೆ ಎಂದು ಹೇಳಲಾಗಿದೆ.