ನವದೆಹಲಿ: ಭಾರತ ತನ್ನ 16 ಏರ್‌ಬಸ್ C-295 ಮಿಲಿಟರಿ ಸಾರಿಗೆ ವಿಮಾನಗಳಲ್ಲಿ ಕೊನೆಯದನ್ನು ಸ್ಪೇನ್‌ನಿಂದ ಶನಿವಾರ ಸ್ವೀಕರಿಸಿದೆ. ಇದು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ ಎಂದು ಸ್ಪೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
C-295 ಸಮಕಾಲೀನ ತಂತ್ರಜ್ಞಾನದೊಂದಿಗೆ 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಹಳೆಯ ಅವ್ರೋ ವಿಮಾನವನ್ನು ಬದಲಿಸಲು ಸಜ್ಜಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ರಾಯಭಾರ ಕಚೇರಿ, ಭಾರತೀಯ ರಾಯಭಾರಿ ದಿನೇಶ್ ಕೆ ಪಟ್ನಾಯಕ್, ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಸೆವಿಲ್ಲೆಯಲ್ಲಿರುವ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಅಸೆಂಬ್ಲಿ ಲೈನ್‌ನಲ್ಲಿ 16 ಏರ್ ಬಸ್ ಸಿ-295 ಮಿಲಿಟರಿ ಸಾರಿಗೆ ವಿಮಾನಗಳಲ್ಲಿ ಕೊನೆಯದನ್ನು ಸ್ವೀಕರಿಸಿದರು.
ನಿಗದಿತ ಸಮಯಕ್ಕಿಂತ ಎರಡು ತಿಂಗಳ ಮುಂಚಿತವಾದ ವಿತರಣೆಯು ಭಾರತದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲನ್ನು ಸೂಚಿಸುತ್ತದೆ ಎಂದು ಹೇಳಿದೆ.
ವಿಮಾನವು 11 ಗಂಟೆಗಳವರೆಗೆ ಹಾರಾಟದ ಸಾಮರ್ಥ್ಯ ಹೊಂದಿದ್ದು, ಇದು ಬಹುಮುಖ ಮತ್ತು ಪರಿಣಾಮಕಾರಿ ಯುದ್ಧತಂತ್ರದ ಸಾರಿಗೆ ವಿಮಾನವಾಗಿದೆ. ಭಾರತವು ಸೆಪ್ಟೆಂಬರ್ 2021 ರಲ್ಲಿ ಭಾರತೀಯ ವಾಯುಪಡೆಗಾಗಿ 56 C-295MW ಸಾರಿಗೆ ವಿಮಾನಗಳನ್ನು ಪಡೆಯಲು ಸ್ಪೇನ್‌ನ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
C-295 ಕಾರ್ಯಕ್ರಮದಡಿ ಒಟ್ಟು 56 ವಿಮಾನಗಳನ್ನು ತಲುಪಿಸಲಾಗುತ್ತಿದೆ. ಅದರಲ್ಲಿ 16 ವಿಮಾನಗಳನ್ನು ಸ್ಪೇನ್‌ನಿಂದ ನೇರವಾಗಿ ಏರ್‌ಬಸ್‌ನಿಂದ ತಲುಪಿಸಲಾಗುತ್ತಿದ್ದು, ಉಳಿದ 40 ಅನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. 16 ವಿಮಾನಗಳಲ್ಲಿ ಕೊನೆಯದನ್ನು ಹಸ್ತಾಂತರಿಸುವ ಮೂಲಕ ಸ್ಪೇನ್ ಶನಿವಾರ ಆ ಬದ್ಧತೆಯನ್ನು ಪೂರೈಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗುಜರಾತ್‌ನ ವಡೋದರದಲ್ಲಿರುವ ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಕ್ಯಾಂಪಸ್‌ನಲ್ಲಿ ಸಿ-295 ವಿಮಾನಗಳನ್ನು ತಯಾರಿಸಲು ಟಾಟಾ ಏರ್ ಕ್ರಾಫ್ಟ್ ಕಾಂಪ್ಲೆಕ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಜಂಟಿಯಾಗಿ ಉದ್ಘಾಟಿಸಿದ್ದರು. ಈ 40 ವಿಮಾನಗಳನ್ನು ಭಾರತದಲ್ಲಿ ತಯಾರಿಸುವ ಜವಾಬ್ದಾರಿಯನ್ನು ಟಿಎಎಸ್ಎಲ್ ಹೊಂದಿದೆ.