ನವದೆಹಲಿ: ರಕ್ಷಣಾ ಸಂಬಂಧಗಳ ಬಲವರ್ಧನೆಯು ರಾಷ್ಟ್ರಗಳ ನಡುವಿನ ಆಳವಾದ ಪರಸ್ಪರ ನಂಬಿಕೆಯ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆಯೊಂದಿಗೆ ಭಾರತ ಮತ್ತು ಫಿಲಿಪೈನ್ಸ್ ಮಂಗಳವಾರ ಕಾರ್ಯತಂತ್ರದ ಪಾಲುದಾರಿಕೆಗೆ ಒಪ್ಪಂದ ಮಾಡಿಕೊಂಡಿವೆ.
ನವದೆಹಲಿಯಲ್ಲಿ ನಡೆದ ಪ್ರಧಾನಿ ಮೋದಿ ಮತ್ತು ಫಿಲಿಫೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್ ಮಾರ್ಕೋಸ್ ಜೂನಿಯರ್ ನಡುವಿನ ದ್ವಿಪಕ್ಷೀಯ ಸಭೆ ವೇಳೆ ಈ ಘೋಷಣೆ ಮಾಡಲಾಯಿತು. ಇಂದು ನಮ್ಮ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ನಿರ್ಧರಿಸಿರುವುದು ಸಂತಸದ ಸಂಗತಿಯಾಗಿದೆ. ಈ ಪಾಲುದಾರಿಕೆಯ ಸಾಮರ್ಥ್ಯವನ್ನು ಫಲಿತಾಂಶಗಳಾಗಿ ಪರಿವರ್ತಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ಸಹ ರೂಪಿಸಲಾಗಿದೆ ಎಂದು ಮೋದಿ ಹೇಳಿದರು.
ಭಾರತ ಮತ್ತು ಫಿಲಿಫೈನ್ಸ್ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 75 ನೇ ವರ್ಷವನ್ನು ಆಚರಿಸುತ್ತಿದ್ದು, ಈ ಸಂದರ್ಭದ ಸ್ಮರಣಾರ್ಥ ಉಭಯ ನಾಯಕರು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಖಂಡಿಸಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಿಂತಿದ್ದಕ್ಕಾಗಿ ಫಿಲಿಪೈನ್ಸ್ ಸರ್ಕಾರಕ್ಕೆ ಮೋದಿ ಧನ್ಯವಾದಗಳನ್ನು ಅರ್ಪಿಸಿದರು. ಭಾರತ ಮತ್ತು ಫಿಲಿಫೈನ್ಸ್ ಆಯ್ಕೆಯಿಂದ ಸ್ನೇಹಿತರು ಮತ್ತು ಅದೃಷ್ಟದಿಂದ ಪಾಲುದಾರರು. ಹಿಂದೂ ಮಹಾಸಾಗರದಿಂದ ಪೆಸಿಫಿಕ್ ವರೆಗೂ ನಾವು ಹಂಚಿತ ಮೌಲ್ಯಗಳಿಂದ ಒಂದಾಗಿದ್ದೇವೆ. ನಮ್ಮದು ಕೇವಲ ಹಿಂದಿನ ಸ್ನೇಹವಲ್ಲ, ಭವಿಷ್ಯದ ಭರವಸೆ" ಎಂದು ಮೋದಿ ಹೇಳಿದರು.
ಭಾರತದ Act East Policy ಮತ್ತು MAHASAGAR ವಿಷನ್ ಪ್ರಕಾರ ಫಿಲಿಫೈನ್ಸ್ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸಮೃದ್ಧಿ ಮತ್ತು ನಿಯಮಾಧಾರಿತ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ. ಅಂತರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ನಾವು ನೌಕಾಯಾನದ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇವೆ ಎಂದು ಮೋದಿ ಹೇಳಿದರು
ಭಾರತ ಮತ್ತು ಫಿಲಿಫೈನ್ಸ್ ನಾಗರಿಕತೆಯ ಸಂಬಂಧಗಳ ತಳಹದಿಯ ನಿಕಟ ಬಾಂಧವ್ಯ ಹೊಂದಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.