ಪಾಟ್ನಾ: ಚುನಾವಣಾ ಅಧಿಕಾರಿಗಳು ಎರಡು ಎಪಿಕ್ ಸಂಖ್ಯೆಗಳನ್ನು ಹೊಂದಿರುವ ಬಗ್ಗೆ ನೋಟಿಸ್ ನೀಡುವ ಮೂಲಕ ತಮ್ಮ "ಸ್ವತಃ ತಪ್ಪಿಗೆ" ನನ್ನನ್ನು ದೂಷಿಸುತ್ತಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಹೇಳಿದ್ದಾರೆ.
ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಳೆದ ವಾರ ತಮಗೆ ಕಳುಹಿಸಲಾದ ನೋಟಿಸ್‌ಗೆ "ತಕ್ಕ ಉತ್ತರ" ನೀಡುತ್ತೇನೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗ ನೋಟಿಸ್ ನೀಡರುವ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್ ಅವರು, "ನನಗೆ ಚುನಾವಣಾ ಆಯೋಗದಿಂದ ಯಾವುದೇ ನೋಟಿಸ್ ಬಂದಿಲ್ಲ. ಪಾಟ್ನಾ ಜಿಲ್ಲಾಡಳಿತದಿಂದ ನೋಟಿಸ್ ಬಂದಿದೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. ನನ್ನ ಉತ್ತರ ಸ್ವೀಕರಿಸಿದ ನಂತರ, ಅವರಿಗೆ ಹೇಳಲು ಏನೂ ಇರುವುದಿಲ್ಲ ಎಂದಿದ್ದಾರೆ.
ಚುನಾವಣಾ ಅಧಿಕಾರಿಗಳು ತಮ್ಮ ಸ್ವಂತ ತಪ್ಪಿಗೆ ನನ್ನನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಹೆಸರಿನಲ್ಲಿ ಎರಡು ಎಪಿಕ್ ಸಂಖ್ಯೆಗಳನ್ನು ನೀಡಿದ್ದರೆ ಅದು ಯಾರ ತಪ್ಪು? ಅದು ಅವರ ತಪ್ಪು. ನಾನು ಒಂದೇ ಸ್ಥಳದಲ್ಲಿ ನನ್ನ ಮತವನ್ನು ಚಲಾಯಿಸುತ್ತಿದ್ದೇನೆ" ಎಂದು ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.
ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಭಾಗವಾಗಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಇತರ ಅನೇಕ ಶ್ರೀಮಂತ ವ್ಯಕ್ತಿಗಳ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಯಾದವ್ ಆರೋಪಿಸಿದ್ದರು. ಅಲ್ಲದೆ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಹೇಳಿದ್ದರು.