ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಗುರುವಾರ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಮೂವರು ಸಿಬ್ಬಂದಿ ಸಾವಿಗೀಡಾಗಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಜೀವಹಾನಿಗೆ ದುಃಖ ವ್ಯಕ್ತಪಡಿಸಿದ್ದು, ಗಾಯಗೊಂಡ ಸಿಬ್ಬಂದಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆ ಮತ್ತು ಸಹಾಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಬಸಂತ್ ಘರ್‌ನಿಂದ ಕಾರ್ಯಾಚರಣೆ ಮುಗಿಸಿ ಬಂಕರ್ ವಾಹನದಲ್ಲಿ ಸಿಬ್ಬಂದಿ ಹಿಂತಿರುಗುತ್ತಿದ್ದಾಗ ಕಡ್ವಾ ಪ್ರದೇಶದಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಪಡೆಯ 187 ಬೆಟಾಲಿಯನ್‌ಗೆ ಸೇರಿದ ಈ ವಾಹನದಲ್ಲಿ 23 ಸಿಬ್ಬಂದಿ ಇದ್ದರು. ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾದರೆ, ಇತರ 16 ಮಂದಿ ಗಾಯಗೊಂಡರು.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಗೊಂಡಿದ್ದವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
'ದೇಶಕ್ಕೆ ಅವರು ನೀಡಿದ ಅನುಕರಣೀಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಾಧ್ಯವಾದಷ್ಟು ಉತ್ತಮ ಆರೈಕೆ ಮತ್ತು ಸಹಾಯ ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ' ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ X ನಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಂತಾಪ ಸೂಚಿಸಿದ್ದು, ವಾಹನವು CRPF ನ ಹಲವಾರು ಧೈರ್ಯಶಾಲಿ ಯೋಧರನ್ನು ಹೊತ್ತೊಯ್ಯುತ್ತಿತ್ತು. ಜಿಲ್ಲಾಧಿಕಾರಿ ಸಲೋನಿ ರೈ ಅವರೊಂದಿಗೆ ಮಾತನಾಡಿದ್ದೇನೆ. ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ತಕ್ಷಣವೇ ರಕ್ಷಣಾ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಸ್ಥಳೀಯರು ಸ್ವಯಂಪ್ರೇರಣೆಯಿಂದ ಸಹಾಯ ಮಾಡುತ್ತಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯ ಮಾಡಲಾಗುತ್ತದೆ' ಎಂದು ಅವರು ಹೇಳಿದರು.