ನವದೆಹಲಿ: ಪಾರ್ಕಿಂಗ್ ವಿಚಾರಕ್ಕೆ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆಯೊಂದು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಗುರುವಾರ (ಆ.7) ತಡರಾತ್ರಿ ನಡೆದಿದೆ.
ರಾತ್ರಿ 10.30 ಗಂಟೆ ಸುಮಾರಿಗೆ, ಸ್ಕೂಟಿಯನ್ನು ಗೇಟ್‌ನಿಂದ ತೆಗೆದು ಪಕ್ಕದಲ್ಲಿ ನಿಲ್ಲಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ಆರೋಪಿಗಳು ಆಸಿಫ್ ಖುರೇಷಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಆಸಿಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಗೆ ತಲುಪಿದಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಮೃತ ಆಸಿಫ್ ಖುರೇಷಿ ಅವರ ಪತ್ನಿ ಹೇಳುವಂತೆ, ಈ ಹಿಂದೆಯೂ ಆರೋಪಿಯು ಪಾರ್ಕಿಂಗ್ ವಿವಾದಕ್ಕಾಗಿ ನನ್ನ ಪತಿಯೊಂದಿಗೆ ಜಗಳವಾಡಿದ್ದ. ಗುರುವಾರ ರಾತ್ರಿ ನನ್ನ ಪತಿ ಕೆಲಸದಿಂದ ಮನೆಗೆ ಹಿಂದಿರುಗಿದಾಗ, ಪಕ್ಕದ ಮನೆಯವರ ಸ್ಕೂಟಿ ಮನೆಯ ಮುಂದೆ ನಿಂತಿತ್ತು. ಅದನ್ನು ತೆಗೆಯಲು ಅವರು ಕೇಳಿದ್ದಾರೆ. ಇದಕ್ಕೆ ಅವರು ಜಗಳ ಶುರು ಮಾಡಿದ್ದರು. ಬಳಿಕ ಆರೋಪಿ ಚೂಪಾದ ಚಾಕುವಿನಿಂದ ಇರಿದಿದ್ದರು ಎಂದು ಆರೋಪಿಸಿದ್ದಾರೆ.
ಆಸಿಫ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಲಾದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಚರ್ಚ್ ಲೇನ್ ನಿವಾಸಿಗಳಾದ ಉಜ್ವಲ್ (19) ಮತ್ತು ಗೌತಮ್ (18) ಎಂದು ಗುರ್ತಿಸಲಾಗಿದೆ. ಇಬ್ಬರ ವಿರುದ್ಧ ಸೆಕ್ಷನ್ 103(1) ಮತ್ತು 3(5) ರ ಅಡಿಯಲ್ಲಿ ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಗಳ ಕೇವಲ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದ್ದೇ ಅಥವಾ ಅವರ ನಡುವೆ ಹಳೆಯ ದ್ವೇಷವೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.