ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪಂಚಕುಯಾನ್ ಮಾರ್ಗ, ಮಥುರಾ ರಸ್ತೆ, ಮತ್ತು ಭಾರತ್ ಮಂಟಪದ ಹೊರಗಿನ ರಸ್ತೆ ಸೇರಿದಂತೆ ಮತ್ತಿತರ ರಸ್ತೆಗಳು ಜಲಾವೃತಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಭಾರಿ ಮಳೆಯಿಂದಾಗಿ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ. ವಿಮಾನ ಟ್ರ್ಯಾಕಿಂಗ್ ಸೈಟ್ ಫ್ಲೈಟ್‌ರಾಡಾರ್ ಪ್ರಕಾರ, ದೆಹಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 182 ವಿಮಾನಗಳ ಹಾರಾಟ ವಿಳಂಬವಾಗಿದೆ. ದೆಹಲಿಗೆ ಆಗಸಬೇಕಾದ 30 ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಕಂಡುಬಂದಿದೆ.
ದೆಹಲಿ ವಿಮಾನ ನಿಲ್ದಾಣವೂ ಪ್ರಯಾಣಿಕರಿಗೆ ಅಗತ್ಯ ಸಲಹೆಗಳನ್ನು ನೀಡಿದೆ,. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ವಿಮಾನ ನಿಲ್ದಾಣದ ಬಳಿ ನೀರು ನಿಂತಿದೆ. ಹೀಗಾಗಿ ಪ್ರಯಾಣಿಕರು ಅದಕ್ಕೆ ತಕ್ಕಂತೆ ಯೋಜಿಸಲು ಮೆಟ್ರೋದಂತಹ ಪರ್ಯಾಯ ಸಾರಿಗೆಗಳಲ್ಲಿ ತೆರಳಲು ಸೂಚಿಸಿದೆ.
ಇತ್ತೀಚಿನ ವರದಿ ಪ್ರಕಾರ ಪ್ರಯಾಣಿಕರು ಆಯಾ ವಿಮಾನಯಾನ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಲು ವಿನಂತಿಸಲಾಗಿದೆ" ಎಂದು ದೆಹಲಿ ವಿಮಾನ ನಿಲ್ದಾಣ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸೂಚಿಸಿದೆ.
ಅನೇಕ ವಿಮಾನಯಾನ ಸಂಸ್ಥೆಗಳು ಸಹ ಪ್ರಯಾಣಿಕರಿಗೆ ಸಲಹೆಗಳನ್ನು ನೀಡಿದ್ದು, ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನದ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಹೇಳಲಾಗಿದೆ.