ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನ ಮಧ್ಯ ಭಾಗದಲ್ಲಿ 15 ವರ್ಷದ ಶಾಲಾ ಬಾಲಕಿಯ ಮೇಲೆ ಐವರು ಕಾಮುಕರು ಮೂರು ತಿಂಗಳ ಅವಧಿಯಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಲಾಚೌಕಿ ಪ್ರದೇಶದಲ್ಲಿ ನಡೆದ ಈ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 25 ವರ್ಷದ ಯುವಕನನ್ನು ಮತ್ತು ನಾಲ್ವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯೊಬ್ಬನ ಗೆಳತಿ ಬಾಲಕಿ ಮನೆಗೆ ಬಂದು ತನ್ನ ಗೆಳೆಯನೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ನಂತರ ಶಾಲಾ ಬಾಲಕಿಯ ಪೋಷಕರು ಆಕೆಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಆರೋಪಿಯೊಂದಿಗೆ ಆಕೆ ದೈಹಿಕ ಸಂಬಂಧ ಹೊಂದಿದ ಬಗ್ಗೆ ಕೆಲವು ವಿಡಿಯೋಗಳು ಮತ್ತು ಸಂದೇಶಗಳು ಪತ್ತೆಯಾಗಿವೆ. ಬಳಿಕ ಪೋಷಕರು ಪೊಲೀಸರನ್ನು ಸಂಪರ್ಕಿಸಿ, ದೂರು ನೀಡಿದ್ದಾರೆ.
ಬಾಲಕಿಯ ಪೋಷಕರು ಸಲ್ಲಿಸಿದ ದೂರಿನ ಆಧಾರದ ಮೇಲೆ, ಐದು ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.