ನವದೆಹಲಿ: ದೆಹಲಿಯಲ್ಲಿ ಸಂಸದರಿಗಾಗಿ ನಿರ್ಮಿಸಲಾದ ಬಹುಮಹಡಿ ಫ್ಲ್ಯಾಟ್‌ಗಳ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು.
ಫ್ಲ್ಯಾಟ್‌ಗಳ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಮೋದಿ, ಸಂಸದರು ತಾವು ವಾಸಿಸುವ ವಸತಿ ಆವರಣದಲ್ಲಿ ಭಾರತದ ವಿವಿಧ ಹಬ್ಬಗಳನ್ನು ಆಚರಿಸಬೇಕು ಮತ್ತು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಂಸತ್ ಸಹೋದ್ಯೋಗಿಗಳಿಗಾಗಿ ನಿವಾಸಿ ಕಾಂಪ್ಲೆಕ್ಸ್ ಉದ್ಘಾಟನೆ ನೆರವೇರಿಸುವ ಅವಕಾಶ ಲಭ್ಯವಾಗಿದೆ. ನಾಲ್ಕು ಟವರ್ ನಿರ್ಮಾಣವಾಗಿದ್ದು, ಅದಕ್ಕೆ ಭಾರತದ ನಾಲ್ಕು ಪ್ರಮುಖ ನದಿಗಳಾದ ಕೃಷ್ಣಾ, ಗೋದಾವರಿ, ಕೋಸಿ, ಹೂಗ್ಲಿ ಎಂದು ಹೆಸರಿಡಲಾಗಿದೆ. ಕೆಲವರು ಕೋಸಿ ಹೆಸರಿನ ಕುರಿತು ಇರಿಸು ಮುರಿಸು ಹೊಂದಿದ್ದಾರೆ. ಅದನ್ನು ಅವರು ನದಿ ಹೆಸರಾಗಿ ನೋಡುವುದಕ್ಕಿಂತ ಬಿಹಾರ ಚುನಾವಣಾ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಹೊಸದಾಗಿ ನಿರ್ಮಿಸಲಾದ ಪ್ರತಿಯೊಂದು ಟೈಪ್-7 ಫ್ಲಾಟ್‌ಗಳು ಅಂದಾಜು 5000 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಹೊಂದಲಿದೆ. ವಸತಿ ಮತ್ತು ಅಧಿಕೃತ ಉದ್ದೇಶಗಳಿಗಾಗಿ ಫ್ಲಾಟ್‌ಗಳನ್ನು ಸಾಕಷ್ಟು ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಸಂಸದರು ತಮ್ಮ ಸಾರ್ವಜನಿಕ ಕರ್ತವ್ಯಗಳನ್ನು ತಮ್ಮ ಮನೆಗಳಿಂದಲೇ ಆರಾಮವಾಗಿ ನಿರ್ವಹಿಸಬಹುದು ಎಂದು ಪ್ರಧಾನಿ ಕಚೇರಿ ಮಾಹಿತಿ ಹಂಚಿಕೊಂಡಿದೆ.
ಈ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಜೊತೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಕಿರಣ್ ರಿಜಿಜು ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಸತಿ ಸಮುಚ್ಛಯ ಸ್ಥಳದಲ್ಲಿ ಸಿಂಧೂರ (ವರ್ಮಿಲಿಯನ್) ಸಸಿಯನ್ನು ನೆಟ್ಟರು. ಈ ವೇಳೆ, ಕಟ್ಟಡ ಕಾರ್ಮಿಕರ ಜೊತೆಗೆ ಸಂಭಾಷಣೆ ಕೂಡ ನಡೆಸಿದರು.