ಚುನಾವಣಾ ಆಯೋಗದ ದಾಖಲೆ ಪರಿಶೀಲನೆಯು "ಮತದಾರರ ವಿರೋಧಿ" ಮತ್ತು ''ಹೊರಗಿಡುವ ನಡೆ'' ಎಂಬ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಅರ್ಜಿಗಳನ್ನು ನ್ಯಾಯಾಲಯವು ಇಂದು ವಿಚಾರಣೆ ನಡೆಸಿತು.
ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಇಂದು ಬೆಳಗ್ಗೆ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದ ಮುಂದೆ ವಾದಿಸುತ್ತಿದ್ದಾಗ ನ್ಯಾಯಮೂರ್ತಿ ಬಾಗ್ಚಿ, ಆಧಾರ್ ಗುರುತಿನಿಂದ ಹೊರಗಿಡುವ ವಾದವನ್ನು ನಾವು ಇಂದು ವಿಚಾರಣೆ ನಡೆಸಿದ್ದೇವೆ. ಆದರೆ ದಾಖಲೆಗಳ ಸಂಖ್ಯೆಯ ಅಂಶವು ಮತದಾರ ಸ್ನೇಹಿಯಾಗಿದ್ದು ವಿರುದ್ಧವಾಗಿಲ್ಲ. ನೀವು ಈ ದೇಶದ ನಾಗರಿಕರು ಎಂದು ಸಾಬೀತುಪಡಿಸಲು ನೀಡಬಹುದಾದ ದಾಖಲೆಗಳ ಸಂಖ್ಯೆಯನ್ನು ನೋಡಿ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, ಚುನಾವಣಾ ಆಯೋಗ ಎಲ್ಲಾ 11 ದಾಖಲೆಗಳನ್ನು ಕೇಳಿದರೆ, ಅದು ಮತದಾರರ ವಿರೋಧಿಯಾಗುತ್ತದೆ. ಆದರೆ ಯಾವುದೋ ಒಂದು ದಾಖಲೆಯನ್ನು ಕೇಳಿದರೆ ಅದನ್ನು ಮತದಾರರ ವಿರುದ್ಧ ಎಂದು ಕರೆಯಲಾಗುತ್ತದೆಯೇ ಎಂದು ಕೇಳಿದರು.
ಮತದಾರರ ಪಟ್ಟಿಯ ಸಾರಾಂಶ ಪರಿಷ್ಕರಣೆಯಲ್ಲಿ SIR ನಲ್ಲಿ ಮತದಾರರಿಂದ ಅಗತ್ಯವಿರುವ ದಾಖಲೆಗಳು 11 ಆಗಿವೆ, ಅದು ಮತದಾರರ ಸ್ನೇಹಿ ಎಂದು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.