ನವದೆಹಲಿ: ಸೈಪ್ರಸ್ ಮೂಲದ "ಅಕ್ರಮ" ಆನ್‌ಲೈನ್ ಬೆಟ್ಟಿಂಗ್ ವೇದಿಕೆಯಾದ ಪ್ಯಾರಿಮ್ಯಾಚ್‌ನ ಭಾರತೀಯ ಕಾರ್ಯಾಚರಣೆಗಳ ವಿರುದ್ಧ ಇತ್ತೀಚೆಗೆ ನಡೆದ ದಾಳಿಯ ನಂತರ ಮ್ಯೂಲ್ ಬ್ಯಾಂಕ್ ಖಾತೆಯಲ್ಲಿದ್ದ 110 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ ಮತ್ತು 1,200 ಮ್ಯೂಲ್ ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.
ಫೆಡರಲ್ ತನಿಖಾ ಸಂಸ್ಥೆಯ ಪ್ರಕಾರ, ಪ್ಯಾರಿಮ್ಯಾಚ್ ಅಪ್ಲಿಕೇಶನ್, ಕ್ರೀಡಾ ಪಂದ್ಯಾವಳಿಗಳ ಪ್ರಾಯೋಜಕತ್ವ ಮತ್ತು ಖ್ಯಾತ ಸೆಲೆಬ್ರಿಟಿಗಳೊಂದಿಗಿನ ಪಾಲುದಾರಿಕೆ ಸೇರಿದಂತೆ "ಆಕ್ರಮಣಕಾರಿ" ಮಾರ್ಕೆಟಿಂಗ್ ಮೂಲಕ ದೇಶದಲ್ಲಿ ಗುರುತಿಸಿಕೊಂಡಿದೆ.
ಇದು ಹೂಡಿಕೆದಾರರಿಗೆ ಹೆಚ್ಚಿನ ಆದಾಯದ ಆಮಿಷವೊಡ್ಡುವ ಮೂಲಕ ವಂಚಿಸಿದೆ ಮತ್ತು ಒಂದು ವರ್ಷದಲ್ಲಿ 3,000 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯ ಗಳಿಸಿದೆ ಎಂದು ಇಡಿ ಆರೋಪಿಸಿದೆ.
ಪ್ಯಾರಿಮ್ಯಾಚ್ ಕಾರ್ಯಾಚರಣೆಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಭಾಗವಾಗಿ ಆಗಸ್ಟ್ 12 ರಂದು ಮುಂಬೈ, ನೋಯ್ಡಾ, ಜೈಪುರ, ಸೂರತ್, ಮಧುರೈ, ಕಾನ್ಪುರ ಮತ್ತು ಹೈದರಾಬಾದ್‌ನ 17 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿತ್ತು.
ಆನ್‌ಲೈನ್ ಬೆಟ್ಟಿಂಗ್ ಮೂಲಕ ಬಳಕೆದಾರರಿಗೆ "ವಂಚನೆ" ಮಾಡಿದ್ದಕ್ಕಾಗಿ ಪ್ಯಾರಿಮ್ಯಾಚ್.ಕಾಮ್ ವಿರುದ್ಧ ಮುಂಬೈ ಪೊಲೀಸರ ಸೈಬರ್ ಪೊಲೀಸ್ ಠಾಣೆ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದೆ.
ಮ್ಯೂಲ್ ಬ್ಯಾಂಕ್(ಅಕ್ರಮ ಹಣ ವರ್ಗಾವಣೆ ಮತ್ತು ಅಂತಹುದೇ ಅಪರಾಧ ಚಟುವಟಿಕೆಗಳಿಗೆ ಬಳಸುವ ಬ್ಯಾಂಕ್ ಖಾತೆಗಳು)ನಲ್ಲಿ ವ್ಯಕ್ತಿಗಳು/ಸಂಸ್ಥೆಗಳಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿರುವ ಸುಮಾರು 110 ಕೋಟಿ ರೂ. ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಏಜೆನ್ಸಿ ತಿಳಿಸಿದೆ.
ಶೋಧದ ಸಮಯದಲ್ಲಿ ಒಂದೇ ಆವರಣದಲ್ಲಿ ಕಂಡುಬಂದ 1,200 ಕ್ಕೂ ಹೆಚ್ಚು ಮ್ಯೂಲ್ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.