ಇಂದೋರ್: ಇಂದೋರ್‌ನ ವಿಜಯನಗರದಲ್ಲಿರುವ ನಿವೃತ್ತ ನ್ಯಾಯಮೂರ್ತಿ ರಮೇಶ್ ಗಾರ್ಗ್ ಅವರ ನಿವಾಸದಲ್ಲಿ ಭಯಾನಕ ರೀತಿಯ ಮನೆ ಕಳ್ಳತನ ನಡೆದಿದೆ.ಮೂವರು ಅಪರಿಚಿತ ಕಳ್ಳರು ಸುಮಾರು ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.
ಕೇವಲ ನಾಲ್ಕು ನಿಮಿಷ ಮತ್ತು ಹತ್ತು ಸೆಕೆಂಡ್‌ಗಳಲ್ಲಿಯೇ ಇಷ್ಟೇಲ್ಲಾ ದರೋಡೆ ಮಾಡಿದ್ದಾರೆ. ಮುಂಜಾನೆ 3-30ರ ವೇಳೆಯಲ್ಲಿ ಈ ದರೋಡೆ ನಡೆದಿದ್ದು, ಮುಖವಾಡ ಧರಿಸಿದ್ದ ಕಳ್ಳರು, ಮುಖ್ಯ ಗೇಟ್‌ನ ಬೀಗವನ್ನು ಮುರಿದು ಬಂಗಲೆ ನುಗಿದ್ದು, ಅಲ್ಮೇರಾ ತೆರೆದು ಬೆಲೆಬಾಳುವ ವಸ್ತುಗಳೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಆಘಾತಕಾರಿ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಬ್ಬ ಕಳ್ಳನ ಕೈಯಲ್ಲಿ ರಾಡ್ ಹಿಡಿದು ಕಾವಲು ನಿಂತಿದ್ದು, ಮತ್ತೊಬ್ಬ ಅಲ್ಮೇರಾದಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾನೆ.
ಭಾನುವಾರ ಬೆಳಗ್ಗೆ ಮನೆಯವರು ಮಲಗಿದ್ದಾಗ ನಡೆದಿರುವ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರಾದರೂ ಅಪರಿಚಿತರು ಬಂದರೆ ಎಚ್ಚರಿಕೆ ನೀಡುವ ವ್ಯವಸ್ಥೆ ಇದ್ದರೂ ನ್ಯಾಯಮೂರ್ತಿ ಗಾರ್ಗ್ ಅವರ ಮಗ ರಿತ್ವಿಕ್ ಗಾಡ ನಿದ್ರೆಗೆ ಜಾರಿದ್ದಾರೆ. ಇವರು ಎದ್ದರೆ ಅವರನ್ನು ಹೊಡೆಯಲು ಒಬ್ಬ ಕಳ್ಳ ಕೈಯಲ್ಲಿ ರಾಡ್ ಹಿಡಿದು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಕಳ್ಳರು ಕಬ್ಬಿಣದ ಕಿಟಕಿಯ ಗ್ರಿಲ್ ಕತ್ತರಿಸಿ ಬಂಗಲೆಗೆ ನುಗ್ಗಿದ್ದಾರೆ. ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ರಿತ್ವಿಕ್‌ನ ಹೆಂಡತಿ ಮತ್ತು ಮಕ್ಕಳಿಗೆ ಕಳ್ಳತನದ ಬಗ್ಗೆ ಗೊತ್ತೇ ಆಗಿಲ್ಲ. ಇದು ಸ್ಥಳೀಯ ಜನರಲ್ಲಿ ಆತಂಕಕ್ಕೆ ಮೂಡಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.