ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಂತೆಯೇ ರಾಹುಲ್ ಗಾಂಧಿ ಅವರ 'ಮತ ಕಳ್ಳತನ' ಆರೋಪ ದೇಶಾದ್ಯಂತ ಸಾಕಷ್ಟು ಚರ್ಚೆ ಹಾಗೂ ಟೀಕೆಗಳಿಗೆ ಗುರಿಯಾಗಿದೆ. ಈ ನಡುವೆ ನಾಳೆ ಭಾರತೀಯ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಠಿಯನ್ನು ಕರೆದಿದೆ.
ನಾಳೆ ಮಧ್ಯಾಹ್ನ 3:00 ಗಂಟೆಗೆ, ಅಂದರೆ, ಆಗಸ್ಟ್ 17, 2025 ರ ಭಾನುವಾರದಂದು ನವದೆಹಲಿಯ ರೈಸಿನಾ ರಸ್ತೆಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಸುದ್ದಿಗೋಷ್ಠಿ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಇದೇ ಮೊದಲ ಬಾರಿಗೆ ಆಯೋಗ ಸುದ್ದಿಗೋಷ್ಠಿ ನಡೆಸುತ್ತಿದೆ. ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಟಿವಿ ಕ್ಯಾಮೆರಾ ಮ್ಯಾನ್ ಗಳಿಗೆ ಮಾತ್ರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಠರಣೆ ವಿರುದ್ಧ ರಾಹುಲ್ ಗಾಂಧಿ ನಾಳೆಯಿಂದ ‘ಮತದಾರ ಅಧಿಕಾರ ಯಾತ್ರೆ’ಯನ್ನು ಆರಂಭಿಸುವ ಮೂಲಕ ಆಯೋಗದ ವಿರುದ್ಧ ನೇರ ಹಣಾಹಣಿಗೆ ಮುಂದಾಗಿರುವಂತೆ ಚುನಾವಣಾ ಆಯೋಗ ಇದೀಗ ದಿಢೀರ್ ಸುದ್ದಿಗೋಷ್ಠಿ ಕರೆದಿದೆ.ಬಿಹಾರದಲ್ಲಿ SIR ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಮತಕಳ್ಳತನ ಆರೋಪವನ್ನು ವಿಪಕ್ಷ ನಾಯಕರು ಮಾಡಿದ್ದಾಗಿನಿಂದ ಚುನಾವಣಾ ಆಯೋಗ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 1 ರಂದು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದು ದೊಡ್ಡ ಪ್ರಮಾಣದ ಮತ ಕಳ್ಳತನದಲ್ಲಿ ನೇರವಾಗಿ ಭಾಗಿಯಾಗಿದ್ದು, ಇದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದ್ದರು.