ಮುಂಬೈ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಮಾಡುತ್ತಿರುವ 'ಮತಕಳ್ಳತನ' ಪ್ರತಿಭಟನಾ ಪೋಸ್ಟರ್ ನಲ್ಲಿ ಅನುಮತಿ ಇಲ್ಲದೇ ತಮ್ಮ ಫೋಟೋ ಬಳಸಿಕೊಂಡಿದ್ದಕ್ಕೆ ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬೇಸರ ಹೊರ ಹಾಕಿದ್ದಾರೆ.
ಪುಣೆಯ ರಸ್ತೆಗಳಲ್ಲಿ ಹಾಕಲಾಗಿರುವ ‘ಮತ ಕಳ್ಳತನ’ ಆರೋಪದ ವಿರುದ್ಧ ಆಂದೋಲನ ನಡೆಸುವಂತೆ ಒತ್ತಾಯಿಸಿ ತಮ್ಮ ಭಿತ್ತಿಫಲಕಗಳನ್ನು ಅಳವಡಿಸಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾನುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, 'ನಾಗರಿಕರಾಗಿ ನಮಗೆ ಕರ್ತವ್ಯಗಳಿಲ್ಲವೇ? ಬೇರೆಯವರ ಕಡೆ ಬೆರಳು ತೋರಿಸುವುದರಿಂದ ಏನನ್ನು ಸಾಧಿಸಲಾಗುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
'ನನ್ನ ಹೋರಾಟದಿಂದ 10 ಕಾನೂನುಗಳು ಜಾರಿಯಾಗಿವೆ. 90 ವರ್ಷ ದಾಟಿದ್ದೇನೆ. ಜನರು ಗಾಢನಿದ್ದೆಯಲ್ಲಿರುವಾಗ ನಾನೇ ಎಲ್ಲವನ್ನೂ ಮಾಡಬೇಕು ಎಂದು ನಿರೀಕ್ಷಿಸಿದರೆ ಅದು ತಪ್ಪು. ಈ ಹಿಂದೆ ನಾನು ಮಾಡಿದ್ದನ್ನು ಯುವಸಮೂಹವು ಇದೀಗ ಮುನ್ನಡೆಸಬೇಕು.
ಇಷ್ಟು ವರ್ಷಗಳ ಹೋರಾಟದ ನಂತರವೂ ಸಮಾಜ ಎಚ್ಚೆತ್ತುಕೊಂಡಿಲ್ಲ. ಗಾಂಧಿಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ ಸಮಸ್ಯೆಗಳ ವಿರುದ್ಧ ಯುವಜನರು ಹೋರಾಟ ನಡೆಸಬೇಕು' ಎಂದರು.
ಭಿತ್ತಿ ಪತ್ರದಲ್ಲೇನಿದೆ?
ಇನ್ನು 'ಮತಕಳ್ಳತನ' ಪ್ರತಿಭಟನಾ ಪೋಸ್ಟರ್ ನಲ್ಲಿ, 'ಈ ಹಿಂದೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೀವು ಮಾಡಿದ್ದ ‘ಮ್ಯಾಜಿಕ್’ ಅನ್ನು ಮತ್ತೊಮ್ಮೆ ನೋಡಲು ದೇಶವು ಉತ್ಸುಕವಾಗಿದೆ. ಚುನಾವಣಾ ಆಯೋಗದ ಅಕ್ರಮಗಳ ಬಗ್ಗೆ ಧ್ವನಿಯೆತ್ತಿ. ಆಂದೋಲನವನ್ನು ಮುನ್ನಡೆಸಿ ಎಂದು ಬರೆಯಲಾಗಿದೆ.
ಅಂತೆಯೇ 'ಅಣ್ಣಾ, ಕನಿಷ್ಠ ಪಕ್ಷ ಈಗಲಾದರೂ ಎಚ್ಚರಗೊಳ್ಳಿ. ರಾವಣ ಮತ್ತು ಲಂಕೆಗಾಗಿ ಕುಂಭಕರ್ಣ ಸಹ ತನ್ನ ದೀರ್ಘ ನಿದ್ದೆಯಿಂದ ಎದ್ದಿದ್ದ. ದೇಶಕ್ಕಾಗಿ ನೀವು ಈಗ ಅದೇ ರೀತಿ ಏಕೆ ಮಾಡಬಾರದು?' ಎಂಬ ಆಗ್ರಹವುಳ್ಳ ಬರಹವು ಮತ್ತೊಂದು ಭಿತ್ತಿಫಲಕದಲ್ಲಿದೆ.
ಸ್ಥಳೀಯ ಕಾರ್ಯಕರ್ತ ಸಮೀರ್ ಉತ್ತರ್ಕರ್ ಹೆಸರಿನಲ್ಲಿ ಪುಣೆಯ ಪಶಾನ್ ಪ್ರದೇಶದಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.