ಭೋಪಾಲ್: ಬಿಹಾರ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆಘಾತ ಎದುರಾಗಿದ್ದು, ಮಧ್ಯಪ್ರದೇಶದಲ್ಲಿ ಜಿಲ್ಲಾ ಮುಖ್ಯಸ್ಥರ ಘೋಷಣೆ ಬೆನ್ನಲ್ಲೇ ಪಕ್ಷದಲ್ಲಿನ ಆಂತರಿಕ ಬಂಡಾಯ ಭುಗಿಲೆದ್ದಿದೆ.
ಮಧ್ಯಪ್ರದೇಶದಲ್ಲಿ 71 ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಹಲವು ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ಸಾಮೂಹಿಕ ರಾಜೀನಾಮೆ ನೀಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮೂಲಗಳ ಪ್ರಕಾರ, '6 ಶಾಸಕರು, ಎಂಟು ಮಾಜಿ ಶಾಸಕರು ಮತ್ತು ಮೂವರು ಮಾಜಿ ಸಚಿವರಿಗೆ ಜಿಲ್ಲಾಧ್ಯಕ್ಷರ ಪಟ್ಟ ನೀಡಲಾಗಿದೆ. ಇದು ಪಕ್ಷದಲ್ಲಿ ತಳಮಟ್ಟದ ನಾಯಕರನ್ನ ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಭೋಪಾಲ್, ಇಂದೋರ್, ಉಜ್ಜಯಿನಿ ಮತ್ತು ಬುರ್ಹಾನ್‌ಪುರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಸಹ ನಡೆದಿವೆ. ಈ ಜಿಲ್ಲೆಗಳಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶಾಕ್ ಕೊಟ್ಟ ದಿಗ್ವಿಜಯ್ ಸಿಂಗ್ ಪುತ್ರನಿಂದಲೂ ಶಾಕ್
ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ಪುತ್ರ ಮಾಜಿ ಸಚಿವ ಜೈವರ್ಧನ್ ಸಿಂಗ್ ಅವರ ಬೆಂಬಲಿಗರು ರಾಘೋಗಢದಲ್ಲಿ ಪ್ರತಿಭಟನೆ ನಡೆಸಿದರು. ಜೈವರ್ಧನ್ ಸಿಂಗ್ ಅವರನ್ನು ರಾಜಕೀಯವಾಗಿ ಕಡೆಗಣಿಸಲಾಗಿದೆ. ಅವರನ್ನು ಜಿಲ್ಲಾಧ್ಯಕ್ಯರನ್ನಾಗಿ ಮಾಡಿದ್ದಾರೆ.
ಅವರಿಗೆ ನೀಡಿದ ಈ ಸ್ಥಾನಮಾನ ಕಡಿಮೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಅವರ ಪ್ರತಿಕೃತಿ ದಹಿಸಿ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ.
ಇತ್ತ ಭೋಪಾಲ್‌ನಲ್ಲಿ ಪ್ರವೀಣ್ ಸಕ್ಸೇನಾ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮರು ನೇಮಕ ಮಾಡಲಾಗಿದ್ದು, ಮಾಜಿ ಜಿಲ್ಲಾಧ್ಯಕ್ಷ ಮೋನು ಸಕ್ಸೇನಾ ಅವರು ಪಕ್ಷದ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ. ಇಂದೋರ್‌ನಲ್ಲಿ ಸಹ ಜಿಲ್ಲಾ ಅಧ್ಯಕ್ಷ ವಿಪಿನ್ ವಾಂಖೆಡೆ ಕಾರ್ಯಕರ್ತರ ವಿರೋಧ ಎದುರಿಸುತ್ತಿದ್ದಾರೆ.
ಅಂತೆಯೇ ಉಜ್ಜಯಿನಿ (ಗ್ರಾಮೀಣ) ಜಿಲ್ಲೆಗೆ ನೇಮಕರಾದ ಮಹೇಶ್ ಪರ್ಮಾರ್ ಮತ್ತು ಸತ್ನಾ ಜಿಲ್ಲೆಗೆ ನೇಮಕರಾದ ಸಿದ್ಧಾರ್ಥ್ ಕುಶ್ವಾಹ ಅವರಿಗೂ ಕಾರ್ಯಕರ್ತರ ವಿರೋಧದ ಬಿಸಿ ತಟ್ಟಿದೆ. ಈಗಾಗಲೇ ರಾಜೀವ್ ಗಾಂಧಿ ಪಂಚಾಯತ್ ಸೆಲ್‌ನ ಜಿಲ್ಲಾ ವಕ್ತಾರ ಹಾಗೂ ಅಧ್ಯಕ್ಷ ಹೇಮಂತ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ.
ಬುರ್ಹಾನ್‌ಪುರದಲ್ಲಿ, ಹಿರಿಯ ನಾಯಕ ಅರುಣ್ ಯಾದವ್ ಅವರ ಬೆಂಬಲಿಗರು ಪ್ರಾತಿನಿಧ್ಯ ನಿರಾಕರಿಸಿದ ಹಿನ್ನಲೆಯಲ್ಲಿ ಮುಚ್ಚಿದ ಬಾಗಿಲಿನ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಓಂಕಾರ್ ಸಿಂಗ್ ಮಾರ್ಕಮ್, ಜೈವರ್ಧನ್ ಸಿಂಗ್, ನಿಲಯ್ ದಾಗಾ ಮತ್ತು ಪ್ರಿಯವ್ರತ್ ಸಿಂಗ್ ಅವರಂತಹ ಪ್ರಮುಖ ಹೆಸರುಗಳನ್ನು ಸೇರಿಸಿಕೊಂಡಿರುವುದರಿಂದ, ಪುನರ್ರಚನೆಯು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.
ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ 21 ಅಧ್ಯಕ್ಷರನ್ನು ಪುನರ್ ನೇಮಕ ಮಾಡಲಾಗಿದೆ. 71 ಸ್ಥಾನಗಳಲ್ಲಿ 37 ಸ್ಥಾನಗಳು ಮೀಸಲು ವರ್ಗಗಳಿಗೆ ಸೇರಿವೆ. ಈ ಹಂಚಿಕೆಯಲ್ಲಿ 35 ಸಾಮಾನ್ಯ, 12 ಹಿಂದುಳಿದ ವರ್ಗ, 10 ಪರಿಶಿಷ್ಟ ಪಂಗಡ, ಎಂಟು ಪರಿಶಿಷ್ಟ ಪಂಗಡ, ನಾಲ್ಕು ಮಹಿಳೆಯರು ಮತ್ತು ಮೂವರು ಅಲ್ಪಸಂಖ್ಯಾತ ಸಮುದಾಯಗಳು ಸೇರಿವೆ. ಮುಖ್ಯವಾಗಿ, ಆರು ಶಾಸಕರು, ಎಂಟು ಮಾಜಿ ಶಾಸಕರು ಮತ್ತು ಮೂವರು ಮಾಜಿ ಸಚಿವರಿಗೆ ಜಿಲ್ಲಾ ಮಟ್ಟದ ಜವಾಬ್ದಾರಿಗಳನ್ನು ನೀಡಲಾಗಿದೆ. ಇದು ತಳ ಮಟ್ಟದ ಕಾರ್ಯಕರ್ತರ ಕೆಂಗಣ್ಣಿಗೆ ಕಾರಣವಾಗಿದೆ.