ನವದೆಹಲಿ: ಭಾರತೀಯ ಮೂಲದ 'ಪೋಸ್ಟ್‌ಮ್ಯಾನ್ ' ಮಾಡಿದ ಕೆಲಸಕ್ಕೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆ ವೆರಿಟಿ ವಾಂಡೆಲ್ ಪೋಸ್ಟ್ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡಾ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅಂತಹುದು ಏನಿದೆ? ಅಂದಹಾಗೆ ಪಾರ್ಸೆಲ್ ಒಂದನ್ನು ವಾಂಡಲ್ ಮನೆಗೆ ತಂದ ಪೋಸ್ಟ್ ಮ್ಯಾನ್, ಹಠಾತ್ ಆಗಿ ಬಂದ ಮಳೆಯಿಂದ ಮನೆ ಆವರಣದಲ್ಲಿ ಒಣಗಿ ಹಾಕಿದ್ದ ಬಟ್ಟೆಗಳನ್ನು ನೀಟಾಗಿ ಮಡಚಿ ಸುರಕ್ಷಿತ ಸ್ಥಳದಲ್ಲಿ ಇಟ್ಟಿದ್ದಾರೆ.
ವಾಂಡಲ್ ಮನೆಗೆ ಮರಳಿದಾಗ ಆಕೆ ತೊಳೆದ ಬಟ್ಟೆಗಳನ್ನು ಮಡಚಿ ಮನೆಯೊಳಗೆ ಇಟ್ಟಿರುವುದನ್ನು ನೋಡಿದ್ದಾರೆ. ಅಲ್ಲದೇ ಪಾರ್ಸೆಲ್ ಜೊತೆಗೆ ಪೋಸ್ಟ್ ಮ್ಯಾನ್ ಬರೆದಿದ್ದ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ಮಳೆಯಿಂದಾಗಿ ನೆನೆಯುತ್ತಿದ್ದ ಬಟ್ಟೆಗಳನ್ನು ತಂದು ಮನೆಯೊಳಗೆ ಇಟ್ಟಿರುವುದಾಗಿ ವಿವರಿಸಿದ್ದಾರೆ.
ಇದರಿಂದ ಆಶ್ಚರ್ಯಗೊಂಡ ವಾಂಡಲ್, ಪತ್ರವನ್ನು ತನ್ನ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೊಂದು 'ವರ್ಣಿಸಲಾಗದ ಕರುಣೆ' ಎಂದು ಬರೆದುಕೊಂಡಿದ್ದಾರೆ.
ಇಂತಹವರು ಒಂದು ಮಿಲಿಯನ್ ನಲ್ಲಿ ಒಬ್ಬರು! ಮನೆಗೆ ವಾಪಸ್ಸಾಗುತ್ತಿದ್ದಾಗ ಆಶ್ಚರ್ಯ ಕಾದಿತ್ತು. ಮನೆಗೆ ಬಂದಾಗ ಒಣಗಿ ಹಾಕಲಾಗಿದ್ದ ಬಟ್ಟೆಗಳ ಸಾಲು ಬರಿದಾಗಿತ್ತು. ಏನಾಯಿತು ಎಂದು ನೋಡಲು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಮಳೆಯಿಂದ ನೆನೆಯುತ್ತಿದ್ದ ಬಟ್ಟೆಗಳನ್ನು ಪೋಸ್ಟ್ ಮ್ಯಾನ್ ಮನೆಗೆ ಒಳಗೆ ತಂದಿರುವುದು ಸೆರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಮ್ಯಾನ್ ಅವರ ಕರ್ತವ್ಯವನ್ನು ಪ್ರಶಂಸಿಸಿದ್ದಾರೆ.
ಆತನನ್ನು "ನಿಜ-ಜೀವನದ ನಾಯಕ" ಮತ್ತು "ಮಾನವನ ರತ್ನ" ಎಂದು ಕರೆದಿದ್ದಾರೆ, ಈ ರೀತಿಯ ಸಣ್ಣ ಕಾರ್ಯಗಳು ಮಾನವೀಯತೆಯ ಮೇಲಿನ ನಂಬಿಕೆಯನ್ನು ಹೇಗೆ ಮರುಸ್ಥಾಪಿಸುತ್ತವೆ ಎಂಬುದನ್ನು ಶ್ಲಾಘಿಸಿದರು. ಈ ವಿಡಿಯೋವನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಷ್ಟಪಟ್ಟಿದ್ದು, ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮ್ಯಾನ್ ನ ಒಳ್ಳೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.