ಲಖನೌ: ಗಂಭೀರ ಪ್ರಕರಣಗಳಲ್ಲಿ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಪದಚ್ಯುತಿಗೊಳಿಸಲು ಅವಕಾಶ ಕಲ್ಪಿಸುವ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ "ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ" ಎಂದು ಬಿಎಸ್ಪಿ ನಾಯಕಿ ಮಾಯಾವತಿ ಗುರುವಾರ ಹೇಳಿದ್ದಾರೆ. ಅಲ್ಲದೆ ಈ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
"ಕೇಂದ್ರ ಸರ್ಕಾರ ನಿನ್ನೆ(ಬುಧವಾರ) ಸಂಸತ್ತಿನಲ್ಲಿ ತೀವ್ರ ಕೋಲಾಹಲದ ನಡುವೆ ಮಂಡಿಸಿದ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ದೇಶದ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಮಸೂದೆಯಾಗಿ ಕಂಡುಬರುತ್ತಿದೆ" ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಆಡಳಿತ ಪಕ್ಷಗಳು ಇದನ್ನು ಹೆಚ್ಚಾಗಿ ತಮ್ಮ ಲಾಭ, ಸ್ವಾರ್ಥ ಮತ್ತು ದ್ವೇಷಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತವೆ ಎಂದು ಸಾರ್ವಜನಿಕರು ಆತಂಕಪಡುತ್ತಿದ್ದಾರೆ. ಆದ್ದರಿಂದ, ನಮ್ಮ ಪಕ್ಷವು ಈ ಮಸೂದೆಯನ್ನು ಒಪ್ಪುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.
ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಇದನ್ನು ಮರುಪರಿಶೀಲಿಸುವುದು ಸೂಕ್ತ" ಎಂದು ಬಿಎಸ್ ಪಿ ಮುಖ್ಯಸ್ಥೆ ಆಗ್ರಹಿಸಿದ್ದಾರೆ.
ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಇತರ ಸಚಿವರನ್ನು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಿದರೆ ಮತ್ತು ಅವರನ್ನು 30 ದಿನಗಳ ಕಾಲ ಜೈಲಿನಲ್ಲಿಟ್ಟರೆ ಅವರನ್ನು ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಈ ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷದ ಸದಸ್ಯರಿಂದ ತೀವ್ರ ಪ್ರತಿಭಟನೆ ನಡೆಸಿದರು ಮತ್ತು ಇದು "ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ" ಎಂದು ಟೀಕಿಸಿದ್ದಾರೆ.