ನವದೆಹಲಿ: ಒಂದು ತಿಂಗಳ ಕಾಲ ನಡೆದ ಸಂಸತ್ ಮುಂಗಾರು ಅಧಿವೇಶನಕ್ಕೆ ಗುರುವಾರ ತೆರೆ ಬಿದಿದ್ದು, ಪ್ರತಿಪಕ್ಷಗಳ ಪ್ರತಿಭಟನೆ, ಮುಂದೂಡಿಕೆ ಮತ್ತು ಸಭಾತ್ಯಾಗದ ನಡುವೆಯೇ ಲೋಕಸಭೆಯಲ್ಲಿ ಹನ್ನೆರಡು ಮಸೂದೆಗಳು ಮತ್ತು ರಾಜ್ಯಸಭೆಯಲ್ಲಿ 15 ಮಸೂದೆಗಳನ್ನು ಅಂಗೀಕರಿಸಲಾಗಿದೆ.
ಈ ಬಾರಿಯ ಮುಂಗಾರು ಅಧಿವೇಶನ ಜುಲೈ 21 ರಂದು ಆರಂಭವಾಯಿತು. ಎರಡೂ ಸದನಗಳಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆ ಹೊರತುಪಡಿಸಿ, ಇತರ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಯಲೇ ಇಲ್ಲ. ಆಪರೇಷನ್ ಸಿಂಧೂರ್ ಕುರಿತು ಚರ್ಚೆಗೆ ಆರಂಭದಲ್ಲಿ ಒತ್ತಾಯಿಸಿದ್ದ ವಿರೋಧ ಪಕ್ಷಗಳು, ನಂತರ ಬಿಹಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದವು.
ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ ಮತ್ತು ಗದ್ದಲದ ನಡುವೆ ಸಂಸತ್ ಮಾನ್ಸೂನ್ ಅಧಿವೇಶನ ಇಂದು ಮುಕ್ತಾಯಗೊಂಡಿತು.
ಲೋಕಸಭೆ ಅಂಗೀಕರಿಸಿದ ಮಸೂದೆಗಳು
ಲೋಕಸಭೆಯಲ್ಲಿ ಗೋವಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ, 2025, ಮರ್ಚೆಂಟ್ ಶಿಪ್ಟಿಂಗ್ ಮಸೂದೆ, 2025, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2025, ಮಣಿಪುರ ವಿನಿಯೋಗ (ಸಂ.2) ಮಸೂದೆ 2025, ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ 2025 ಮತ್ತು ರಾಷ್ಟ್ರೀಯ ಡೋಪಿಂಗ್ ವಿರೋಧಿ(ತಿದ್ದುಪಡಿ) ಮಸೂದೆ 2025, ಆದಾಯ ತೆರಿಗೆ ಮಸೂದೆ 2025, ತೆರಿಗೆ ಕಾನೂನುಗಳು(ತಿದ್ದುಪಡಿ) ಮಸೂದೆ, 2025, ಭಾರತೀಯ ಬಂದರು ಮಸೂದೆ 2025 ಮತ್ತು ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಸೇರಿದಂತೆ 12 ಮಸೂದೆಗಳನ್ನು ಅಂಗೀಕರಿಸಲಾಯಿತು.
ರಾಜ್ಯಸಭೆ ಅಂಗೀಕರಿಸಿದ ಮಸೂದೆಗಳು
ಸರಕು ಸಾಗಣೆ ಮಸೂದೆ 2025, ಸಮುದ್ರದ ಮೂಲಕ ಸರಕುಗಳ ಸಾಗಣೆ ಮಸೂದೆ 2025, ಕರಾವಳಿ ಸಾಗಣೆ ಮಸೂದೆ 2025, ಮಣಿಪುರ ಸರಕು ಮತ್ತು ಸೇವಾ ತೆರಿಗೆ(ತಿದ್ದುಪಡಿ) ಮಸೂದೆ 2025, ಮಣಿಪುರ ವಿನಿಯೋಗ (ಸಂ.2) ಮಸೂದೆ 2025, ವ್ಯಾಪಾರಿ ಸಾಗಣೆ ಮಸೂದೆ 2025 ಮತ್ತು ಗೋವಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರು ಹೊಂದಾಣಿಕೆ ಮಸೂದೆ 2025, ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ 2025, ರಾಷ್ಟ್ರೀಯ ಡೋಪಿಂಗ್ ವಿರೋಧಿ(ತಿದ್ದುಪಡಿ) ಮಸೂದೆ 2025, ಆದಾಯ ತೆರಿಗೆ ಮಸೂದೆ 2025, ತೆರಿಗೆ ಕಾನೂನುಗಳು(ತಿದ್ದುಪಡಿ) ಮಸೂದೆ 2025, ಭಾರತೀಯ ಬಂದರು ಮಸೂದೆ 2025, ಗಣಿ ಮತ್ತು ಖನಿಜಗಳು(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025, ಭಾರತೀಯ ನಿರ್ವಹಣಾ ಸಂಸ್ಥೆಗಳ(ತಿದ್ದುಪಡಿ) ಮಸೂದೆ 2025 ಮತ್ತು ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025.