ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ತನ್ನ ಸಹೋದರನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿ, ತನ್ನ ವಿಧವೆ ಅತ್ತಿಗೆ ಮತ್ತು ಆಕೆಯ ಮೂವರು ಹೆಣ್ಣುಮಕ್ಕಳನ್ನು ಸಹಚರನ ಸಹಾಯದಿಂದ ನದಿಗೆ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಹ್ರೈಚ್‌ನ ರಾಮೈಪೂರ್ವ ಗ್ರಾಮದ ನಿವಾಸಿ ಅನಿರುದ್ಧ್ ಕುಮಾರ್ ನನ್ನು 2018 ರಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಅಣ್ಣ ಸಂತೋಷ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹಾಕಲಾಗಿತ್ತು ಎಂದು ಎಎಸ್ಪಿ(ಗ್ರಾಮೀಣ) ದುರ್ಗಾ ಪ್ರಸಾದ್ ತಿವಾರಿ ಅವರು ಹೇಳಿದ್ದಾರೆ.
ಕೊಲೆಯಾದ ಕೆಲವು ತಿಂಗಳ ನಂತರ ಜಾಮೀನು ಪಡೆದಿದ್ದ ಆರೋಪಿ ಅನಿರುದ್ಧ್, ತನ್ನ ಸಹೋದರನ ಪತ್ನಿ ಸುಮನ್(36)ರೊಂದಿಗೆ ವಾಸಿಸಲು ಆರಂಭಿಸಿದ್ದ ಮತ್ತು ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಅವರಿಗೆ ಆರು ವರ್ಷದ ಅಂಶಿಕಾ ಮತ್ತು ಮೂರು ವರ್ಷದ ಲಾಡೊ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸುಮನ್‌ಗೆ ಸಂತೋಷ್‌ನೊಂದಿಗಿನ ಮದುವೆಯಿಂದ 12 ವರ್ಷದ ಮಗಳು ನಂದಿನಿ ಕೂಡ ಇದ್ದಳು. ಸುಮನ್ ತನ್ನ ಪತಿಯ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರಿಂದ, ಅನಿರುದ್ಧ್ ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಅವಳನ್ನು ಕೇಳುತ್ತಿದ್ದ. ಆದರೆ ಇದಕ್ಕೆ ಸುಮನ್ ಒಪ್ಪಿರಲಿಲ್ಲ. ಹೀಗಾಗಿ ಸುಮನ್ ಇತ್ತೀಚೆಗೆ ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ತನ್ನ ತಾಯಿಯ ಮನೆಗೆ ಸ್ಥಳಾಂತರಗೊಂಡಿದ್ದರು.
ಆಗಸ್ಟ್ 19 ರಂದು, ಸುಮನ್ ಅವರ ತಾಯಿ ರಾಮಪಟ ಅವರು ತಮ್ಮ ಮಗಳು ಮತ್ತು ಮೂವರು ಮಕ್ಕಳು ಆಗಸ್ಟ್ 14 ರಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅನಿರುದ್ಧ್ ಮತ್ತು ಅವರ ಸಹಚರರು, ನಾಲ್ವರನ್ನು ಅಪಹರಿಸಿದ್ದಾರೆ ಮತ್ತು ಅವರನ್ನು ಕೊಲ್ಲುವ ಉದ್ದೇಶದಿಂದ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿದ ಪೊಲೀಸರು ಮೋತಿಪುರ ಪ್ರದೇಶದ ಗೈಘಾಟ್ ಸೇತುವೆಯಲ್ಲಿ ಅನಿರುದ್ಧ್ ನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಅನಿರುದ್ಧ್ ತನ್ನ ಸಹಚರರ ಸಹಾಯದಿಂದ ಆಗಸ್ಟ್ 14 ರಂದು ಸುಮನ್ ಮತ್ತು ಮೂವರು ಹುಡುಗಿಯರನ್ನು ಮಿಹಿಪುರ್ವಾ ಪಟ್ಟಣಕ್ಕೆ ಕರೆದೊಯ್ದಿದ್ದಾಗಿ ಒಪ್ಪಿಕೊಂಡರು. ನಂತರ ಅವರನ್ನು ಲಖಿಂಪುರ ಖೇರಿ ಜಿಲ್ಲೆಯ ಖಮ್ಹರಿಯಾ ಪ್ರದೇಶದ ಶಾರದಾ ನದಿಯ ಸೇತುವೆಗೆ ಕರೆದೊಯ್ದು ನದಿಗೆ ತಳ್ಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಸುಮನ್ ಮತ್ತು ಹುಡುಗಿಯರ ಬಟ್ಟೆಗಳು, ಹುಡುಗಿಯರಲ್ಲಿ ಒಬ್ಬಳ ಬೂಟುಗಳು ಮತ್ತು ಅಪರಾಧಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಸ್ಥಳದ ಸಮೀಪದ ಪೊದೆಗಳಿಂದ ವಶಪಡಿಸಿಕೊಂಡಿದ್ದಾರೆ ಎಂದು ಎಎಸ್ಪಿ ಹೇಳಿದ್ದಾರೆ.
ಆದರೆ ಶವಗಳು ಇನ್ನೂ ಪತ್ತೆಯಾಗಿಲ್ಲ. ಅನಿರುದ್ಧ್ ಅವರ ಸಹಚರ ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಎಸ್ಪಿ ಹೇಳಿದ್ದಾರೆ.