ಭುವನೇಶ್ವರ: ಶಾಲೆಯೊಂದರಲ್ಲಿ ಶಿಕ್ಷಕರು ತರಗತಿಯೊಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಗಮನಿಸದೇ ಶಾಲೆಗೆ ಬೀಗ ಹಾಕಿ ಹೋದ ಆಘಾತಕಾರಿ ಘಟನೆ ವರದಿಯಾಗಿದೆ.
ಒಡಿಶಾದ ಕಿಯೋಂಜಾರ್ ಜಿಲ್ಲೆಯ ಅಂಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರು ಒಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಗಮನಿಸದೇ ತರಗತಿ ಕೋಣೆಗೆ ಬೀಗ ಹಾಕಿ ಹೋಗಿದ್ದಾರೆ. ಇದರಿಂದ ಹೊರಗೆ ಬರಲು ಯತ್ನಿಸಿದ ಬಾಲಕಿ ರಾತ್ರಿಯಿಡೀ ಕಿಟಕಿಯಲ್ಲಿ ಸಿಲುಕಿಕೊಂಡು ಕಾಲ ಕಳೆದ ಘಟನೆ ನಡೆದಿದೆ.
ಶಾಲೆಯಲ್ಲಿ ಪುಟ್ಟ ಮಕ್ಕಳು ನಿದ್ದೆಗೆ ಜಾರುವುದು ಸಾಮಾನ್ಯ. ಇದನ್ನು ಗಮನಿಸಬೇಕಾದ್ದು ಶಾಲಾ ಸಿಬ್ಬಂದಿಗಳ ಕರ್ತವ್ಯ. ಆದರೆ ಅಂಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳ ಎಡವಟ್ಟಿನಿಂದಾಗಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪುಟ್ಟ ಬಾಲಕಿ ಇಡೀ ರಾತ್ರಿ ಶಾಲೆಯಲ್ಲಿ ಒಬ್ಬಳೆ ಒದ್ದಾಡಿರುವ ಘಟನೆ ನಡೆದಿದೆ.
ಆಗಿದ್ದೇನು?
ಶಾಲೆ ಬಿಡುವ ಸಮಯದಲ್ಲಿ 2ನೇ ಕ್ಲಾಸ್ ಬಾಲಕಿ ಶಾಲಾ ಕೊಠಡಿಯೊಳಗೆಯೇ ನಿದ್ದೆಗೆ ಜಾರಿದ್ದಾಳೆ. ಆದರೆ ಶಾಲಾ ಶಿಕ್ಷಕರಿಗೆ ಶಾಲೆಗೆ ಬೀಗ ಹಾಕುವ ವೇಳೆ ಬಾಲಕಿಯೊಬ್ಬಳು ಕೊಠಡಿಯೊಳಗೆ ನಿದ್ದೆಗೆ ಜಾರಿದ್ದನ್ನು ಗಮನಿಸಿಲ್ಲ, ಶಾಲಾ ಸಮಯ ಮುಗಿಯುತ್ತಲೇ ಎಲ್ಲರೂ ಕೊಠಡಿಯಿಂದ ಹೊರಗೆ ಹೋಗಿದ್ದು, ಸಿಬ್ಬಂದಿ ಕೊಠಡಿಗೆ ಬೀಗ ಹಾಕಿದ್ದಾರೆ.
ಆದರೆ ನಿದ್ದೆಗೆ ಜಾರಿದ ಬಾಲಕಿಗೆ ಸ್ವಲ್ಪ ಹೊತ್ತಿನಲ್ಲೇ ಎಚ್ಚರವಾಗಿದ್ದು, ಕತ್ತಲ ಕೋಣೆಯಲ್ಲಿ ತಾನೊಬ್ಬಳೇ ಬಾಕಿಯಾಗಿರುವುದು ತಿಳಿದು ಭಯಗೊಂಡಿದ್ದಾಳೆ. ಈ ವೇಳೆ ಬಾಲಕಿ ಕೂಗಿದರೂ ಯಾರೂ ಆಕೆಯ ನೆರವಿಗೆ ಬಂದಿಲ್ಲ.
ಕಿಟಕಿ ಸರಳಿಗೆ ಕತ್ತು ಸಿಲುಕಿ ಒದ್ದಾಡಿದ ಬಾಲಕಿ
ಇನ್ನು ಯಾರೂ ತನ್ನ ನೆರವಿಗೆ ಬರುತ್ತಿಲ್ಲ ಎಂದು ಬಾಲಕಿಯೇ ಕಿಟಕಿ ಮೂಲಕ ಹೊರಗೆ ಹೋಗುವ ಪ್ರಯತ್ನ ಮಾಡಿದ್ದಾಳೆ. ಈ ವೇಳೆ ಕಿಟಕಿಯ ಸರಳುಗಳ ಮೂಲಕ ತನ್ನ ತಲೆ ಹಾಕಿ ಹೊರಹೋಗಲು ಯತ್ನಿಸಿದ್ದು ಈ ವೇಳೆ ಆಕೆಯ ಕುತ್ತಿಗೆ ಸರಳಿಗೆ ಸಿಲುಕಿಕೊಂಡಿದೆ. ಅದೇ ಸ್ಥಿತಿಯಲ್ಲಿ ಬಾಲಕಿ ಇಡೀ ರಾತ್ರಿ ಕಳೆದಿದ್ದು, ಆ ಜಾಗದಲ್ಲಿ ಕಾಡುಪ್ರಾಣಿಗಳ ಹಾವಳಿಯಂತೆ. ರಾತ್ರಿಯಿಡೀ ಬಾಲಕಿ ಕಾಡುಪ್ರಾಣಿಗಳ ಭಯದ ಜೊತೆ ಈ ಕತ್ತಲ ಕೋಣೆಯ ಕಿಟಕಿಯಲ್ಲಿ ತಲೆ ಸಿಲುಕಿಸಿಕೊಂಡೇ ಕಾಲ ಕಳೆದಿದ್ದಾಳೆ.
ಪೋಷಕರ ಹುಡುಕಾಟ
ಇತ್ತ ಈಕೆಯ ಪೋಷಕರು ದಿನಗೂಲಿ ನೌಕರರಾಗಿದ್ದು, ಮಗಳು ಶಾಲೆಯಿಂದ ಬಾರದೇ ಇರುವುದನ್ನು ನೋಡಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕಿ ಮಾತ್ರ ಅವರಿಗೆ ಸಿಗಲಿಲ್ಲ. ಪೋಷಕರು ಶಾಲಾ ಸಿಬ್ಬಂದಿಗಳನ್ನು ವಿಚಾರಿಸಿದಾಗ ಅವರು ಎಲ್ಲ ಮಕ್ಕಳೂ ಆಗಲೇ ಮನೆಗೆ ಹೋದರು ಎಂದು ಹೇಳಿದ್ದಾರೆ.
ಶಾಲಾ ಬಾಗಿಲು ತೆರೆದಾಗ ಬಾಲಕಿ ಪತ್ತೆ
ಮರುದಿನ ಬೆಳಗ್ಗೆ ಶಾಲೆ ಬಾಗಿಲು ತೆರೆದ ಶಾಲಾ ಸಿಬ್ಬಂದಿಗೆ ತಾವು ಮಾಡಿದ ಎಡವಟ್ಟು ಬೆಳಕಿಗೆ ಬಂದಿದ್ದು, ಬಾಲಕಿ ಕಿಟಕಿಯಲ್ಲಿ ಸಿಲುಕಿದ ತನ್ನ ತಲೆಯನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾ ಸುಸ್ತಾಗಿ ಕಿಟಕಿಯಲ್ಲೇ ಕುಳಿತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸಿಬ್ಬಂದಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಕಿಟಕಿಯ ಸರಳನ್ನು ಅಗಲಿಸುವ ಮೂಲಕ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪೋಷಕರ ಆಕ್ರೋಶ
ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳ ರಕ್ಷಣೆ ಕುರಿತು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಾಲಕಿ ಜೋತ್ಸ್ನಾ ತಾಯಿ ಜುನು ದೇಹುರಿ ಕಿಡಿಕಾರಿದ್ದಾರೆ. 'ಅವರು ಯಾವುದೇ ಮಗುವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಿತ್ತು. ನನ್ನ ಪುಟ್ಟ ಮಗಳು ರಾತ್ರಿಯನ್ನು ಹೇಗೆ ಕಳೆದಳು ಎಂಬುದನ್ನು ಊಹಿಸಿಯೇ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
ಮುಖ್ಯೋಪದ್ಯಾಯರ ಅಮಾನತು
ಬಾಲಕಿ ತರಗತಿಯೊಳಗೆ ನಿದ್ರಿಸಿದ್ದಳು, ಕೊಠಡಿಯಲ್ಲಿ ಮಕ್ಕಳು ಇದ್ದಾರೋ ಇಲ್ಲವೋ ಎಂದು ಸರಿಯಾದ ತಪಾಸಣೆ ಮಾಡದೇ ಲಾಕ್ ಮಾಡಲಾಗಿತ್ತು. ಈ ಘಟನೆ ದುರದೃಷ್ಟಕರ ಎಂದು ಶಾಲೆಯ ಶಿಕ್ಷಕಿ ಸಂಜಿತಾ ದಾಶ್ ಹೇಳಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯ ಮುಖ್ಯೋಪಾಧ್ಯಾಯರಾದ ಗೌರಹರಿ ಮೊಹಂತ ಅವರನ್ನು ನಿರ್ಲಕ್ಷ್ಯದ ಆರೋಪದಡಿ ಅಮಾನತುಗೊಳಿಸಲಾಗಿದೆ.