ನವದೆಹಲಿ: ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ (ಪಪ್ಪಿ) ಅವರನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ತಿಳಿಸಿದೆ.
ಶುಕ್ರವಾರ ಹಲವು ರಾಜ್ಯಗಳಲ್ಲಿ ನಡೆಸಿದ ದಾಳಿಯ ನಂತರ 12 ಕೋಟಿ ರೂ. ನಗದು (ಒಂದು ಕೋಟಿ ರೂ. ವಿದೇಶಿ ಕರೆನ್ಸಿ ಸೇರಿದಂತೆ), 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸುಮಾರು 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಕೇಂದ್ರದ ತನಿಖಾ ಸಂಸ್ಥೆ ತಿಳಿಸಿದೆ.
ಯಾವ ಕಡೆಗಳಿಂದ ಏನನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ತನಿಖಾ ಸಂಸ್ಥೆ ಸ್ಪಷ್ಟಪಡಿಸಿಲ್ಲ.
ಚಿತ್ರದುರ್ಗದ 50 ವರ್ಷದ ಶಾಸಕರನ್ನು ಶುಕ್ರವಾರ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು ಮತ್ತು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಅದು ಹೇಳಿದೆ.
ಈ ಪ್ರಕರಣದ ತನಿಖೆಯನ್ನು ಇ.ಡಿಯ ಬೆಂಗಳೂರು ವಲಯ ನಡೆಸುತ್ತಿದೆ.
ಶಾಸಕರು ತಮ್ಮ ಸಹಚರರೊಂದಿಗೆ ಕ್ಯಾಸಿನೊವನ್ನು ಗುತ್ತಿಗೆ ಪಡೆಯುವ ಸಲುವಾಗಿ ಮಾತುಕತೆ ನಡೆಸಲು ಗ್ಯಾಂಗ್ಟಾಕ್‌ಗೆ ಭೇಟಿ ನೀಡಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.
'ವೀರೇಂದ್ರ ಅವರ ಸಹೋದರ ಕೆಸಿ ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್ ರಾಜ್ ಅವರ ನಿವಾಸದಿಂದ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಸಹೋದರ ಕೆಸಿ ತಿಪ್ಪೇಸ್ವಾಮಿ ಮತ್ತು ಅವರ ಇತರ ಸಹಚರರು ದುಬೈನಿಂದ ಆನ್‌ಲೈನ್ ಗೇಮಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾರೆ' ಎಂದು ಇ.ಡಿ ತಿಳಿಸಿದೆ.
ಕರ್ನಾಟಕದ ಚಿತ್ರದುರ್ಗ, ಹುಬ್ಬಳ್ಳಿ ಮತ್ತು ಬೆಂಗಳೂರು, ಜೋಧ್‌ಪುರ (ರಾಜಸ್ಥಾನ), ಸಿಕ್ಕಿಂ, ಮುಂಬೈ ಮತ್ತು ಗೋವಾ ಸೇರಿದಂತೆ 31 ಸ್ಥಳಗಳಲ್ಲಿ ತನಿಖಾ ಸಂಸ್ಥೆಯು ಶೋಧಕಾರ್ಯವನ್ನು ಮುಕ್ತಾಯಗೊಳಿಸಿದೆ.
ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊ ಎಂಬ ಹೆಸರಿನ ಗೋವಾದ ಐದು ಕ್ಯಾಸಿನೊಗಳ ಮೇಲೆಯೂ ದಾಳಿ ನಡೆಸಲಾಗಿದೆ.
ED ಪ್ರಕಾರ, ವೀರೇಂದ್ರ ಅವರು King567, Raja567, Puppy's003, Rathna Gaming ಮುಂತಾದ ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಅವರ ಸಹೋದರ ಕೆಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟೆಕ್, TRS ಟೆಕ್ನಾಲಜೀಸ್ ಮತ್ತು ಪ್ರೈಮ್9ಟೆಕ್ನಾಲಜೀಸ್ ಎಂಬ ಮೂರು ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗಳು ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಪಟ್ಟಿವೆ ಎಂದು ಆರೋಪಿಸಲಾಗಿದೆ.
ಶೋಧದ ಸಮಯದಲ್ಲಿ ಸುಮಾರು 17 ಬ್ಯಾಂಕ್ ಖಾತೆಗಳು ಮತ್ತು 2 ಲಾಕರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಶಾಸಕರು ಚಿತ್ರದುರ್ಗದಲ್ಲಿ 003 ನೋಂದಣಿ ಸಂಖ್ಯೆ ಪ್ಲೇಟ್‌ನೊಂದಿಗೆ 'ಅತಿದೊಡ್ಡ ಕಾರು ಸಂಗ್ರಹ' ಹೊಂದಿದ್ದಾರೆ ಎಂದು ಹೇಳಿಕೊಳ್ಳುವ ಕೆಲವು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ದುಬಾರಿ ಬೆಲೆಯ ವಾಹನಗಳ ಮಾಲೀಕತ್ವ ಮತ್ತು ಹಣದ ಮೂಲವನ್ನು ತನಿಖೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಪ್ತಿ ಮಾಡಲಾದವುಗಳಲ್ಲಿ MGM ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲ್ಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊ, ಕ್ಯಾಸಿನೊ ಜ್ಯುವೆಲ್ ಇತ್ಯಾದಿ ಹೆಸರಿನ ಹಲವಾರು ಅಂತರರಾಷ್ಟ್ರೀಯ ಕ್ಯಾಸಿನೊ ಸದಸ್ಯತ್ವ ಮತ್ತು ರಿವಾರ್ಡ್ ಕಾರ್ಡ್‌ಗಳು ಸೇರಿವೆ. ವಿವಿಧ ಬ್ಯಾಂಕ್‌ಗಳ ಹಲವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮತ್ತು ಕೆಲವು 5-ಸ್ಟಾರ್ ಹೋಟೆಲ್‌ಗಳ ಸದಸ್ಯತ್ವ ಕಾರ್ಡ್‌ಗಳನ್ನು ಸಹ ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ.