ಹೈದರಾಬಾದ್: ತೆಲಂಗಾಣದಲ್ಲಿ ಕೌಟುಂಬಿಕ ಕಲಹದಿಂದಾಗಿ ಗರ್ಭಿಣಿ ಪತ್ನಿಯನ್ನು ಆಕೆಯ ಗಂಡನೇ ಕೊಂದು ಹಾಕಿದ್ದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ.
ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಮೆಡಿಪಲ್ಲಿಯ ಉಪನಗರವಾದ ಬಾಲಾಜಿಗುಟ್ಟದಲ್ಲಿ ಈ ಭೀಕರ ಘಟನೆ ನಡೆದಿದ್ದು, ಒಬ್ಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ ವಿಕಾರಾಬಾದ್ ಜಿಲ್ಲೆಯ ಕಾಮರೆಡ್ಡಿಗೂಡಂನ ಸ್ವಾತಿ ಮತ್ತು ಮಹೇಂದರ್ ಪ್ರೀತಿಸಿ ಮದುವೆಯಾಗಿ ಬಾಲಾಜಿ ಗುಟ್ಟ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಬಳಿಕ ಮಹೇಂದರ್ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದ.
ಮುಖ್ಯವಾಗಿ ಆಕೆ ಗರ್ಭಿಣಿಯಾದ ಬಳಿಕ ಮಹೇಂದರ್ ಅನುಮಾನ ಜಾಸ್ತಿಯಾಗಿತ್ತು. ಆಕೆಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎಂದು ಮಹೇಂದರ್ ಭಾವಿಸಿದ್ದ. ಹೀಗಾಗಿ ಆಕೆಯನ್ನು ಕೊಲ್ಲುವ ಉದ್ದೇಶದಿಂದಲೇ ವಿಕಾರಾಬಾದ್ ನಿಂದ ಬಾಲಾಜಿ ಹೈದರಾಬಾದ್ ನ ಬಾಲಾಜಿಗುಟ್ಟಕ್ಕೆ ಕರೆತಂದಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಪತ್ನಿ ಸ್ವಾತಿಯನ್ನು ಕೊಂದ ಬಳಿಕ ಮಹೇಂದರ್ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿ ಹೊರಗೆ ತೆಗೆದುಕೊಂಡು ಹೋಗಿ ಹೂಳಲು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಬ್ದ ಕೇಳಿ, ನೆರೆಹೊರೆಯವರು ಪರಿಶೀಲನೆ ನಡೆಸಲು ಹೋದಾಗ ಭಯಾನಕ ಸತ್ಯ ಹೊರಬಿದ್ದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹೇಂದರ್ ನನ್ನು ಬಂಧಿಸಿದ್ದಾರೆ.
ದೇಹದ ಭಾಗಗಳು ನದಿಗೆಸೆದ ಪಾಪಿ
ಗಂಡ ಮಹೇಂದರ್ ಸ್ವಾತಿಯನ್ನು ಕೊಂದು ಆಕೆಯ ತಲೆ, ಕೈಗಳು ಮತ್ತು ಕಾಲುಗಳನ್ನು ಮುಸಿ ನದಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಾವು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಮಹಿಳೆಯ ಮುಂಡ ಮಾತ್ರ ಪತ್ತೆಯಾಗಿದೆ. ಮೃತಳನ್ನು ಗುರುತಿಸಲು ನಾವು ಡಿಎನ್‌ಎ ಪರೀಕ್ಷೆ ನಡೆಸುತ್ತೇವೆ. ನಾವು ಬಿಎನ್ಎಸ್ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತ್ವರಿತ ತನಿಖೆ ಮತ್ತು ವಿಚಾರಣೆ ನಡೆಯಲಿದೆ ಎಂದು ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.