ನೋಯ್ಡಾ: ಆಗಸ್ಟ್ 22ರಂದು ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳದಿಂದಾಗಿ ಯುವತಿಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನಿಕ್ಕಿ ಭಾಟಿ (26) ಅವರ ತಂದೆ ಭಿಕಾರಿ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ನಿಕ್ಕಿಯ ಪತಿ, ಆತನ ಸಹೋದರ, ತಾಯಿ ಮತ್ತು ತಂದೆಯನ್ನು ಬಂಧಿಸಿದ್ದಾರೆ.
ಇಬ್ಬರ ಬಂಧನಗಳನ್ನು ಪ್ರತ್ಯೇಕವಾಗಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಆಗಸ್ಟ್ 22 ರಂದು ಕಸ್ನಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) (ಕೊಲೆ), 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), ಮತ್ತು 61(2) (ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧಗಳನ್ನು ಮಾಡಲು ಪ್ರಯತ್ನ) ಅಡಿಯಲ್ಲಿ ಅವರ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತವರು ಮನೆಯಿಂದ 36 ಲಕ್ಷ ರೂ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಗಂಡ ಮತ್ತು ಅತ್ತೆ ಸೇರಿಕೊಂಡು ನಿಕ್ಕಿ ಎಂಬ ಮಹಿಳೆಗೆ ಪುಟ್ಟ ಮಗನ ಎದುರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದರು. ನಿಕ್ಕಿ ಭಾಟಿಯ ಪತಿ ವಿಪಿನ್ ಭಾಟಿ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅವರ ಕಾಲಿಗೆ ಗುಂಡೇಟು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.