ಚಂಡಿಗಢ: ಭಾರಿ ಮಳೆಯಿಂದಾಗಿ ಭೀಕರ ಪ್ರವಾಹಕ್ಕೆ ನಲುಗುತ್ತಿರುವ ಪಂಜಾಬ್ ಪ್ರಾಂತ್ಯದಲ್ಲಿ ಜನ ಸಾಮಾನ್ಯರು ಮಾತ್ರವಲ್ಲ ಗಡಿ ಕಾಯುವ ಯೋಧರೂ ಕೂಡ ಪ್ರಾಣಾಪಾಯಕ್ಕೆ ಸಿಲುಕಿದ್ದು, ಪ್ರವಾಹದಲ್ಲಿ ಸಿಲುಕಿದ್ದ 25 ಮಂದಿ ಸಿಆರ್ ಪಿಎಫ್ ಯೋಧರನ್ನು ಭಾರತೀಯ ಸೇನಾಪಡೆಯ ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.
ಬುಧವಾರ ಬೆಳಿಗ್ಗೆ ಪಂಜಾಬ್‌ನ ಪ್ರವಾಹ ಪೀಡಿತ ಗ್ರಾಮದಿಂದ 22 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ಸೇನಾ ಹೆಲಿಕಾಪ್ಟರ್ ನಲ್ಲಿ ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಅತ್ತ ಸೇನಾ ಹೆಲಿಕಾಪ್ಟರ್ ತೆರಳುತ್ತಲೇ ಇತ್ತ ಯೋಧರು ಆಶ್ರಯ ಪಡೆದಿದ್ದ ಕಟ್ಟಡ ಕೆಲವೇ ಕ್ಷಣಗಳಲ್ಲಿ ಕುಸಿಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಸೇನಾ ವಿಮಾನಯಾನವು ತ್ವರಿತ ಮತ್ತು ಧೈರ್ಯಶಾಲಿ ಕಾರ್ಯಾಚರಣೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಲಖನ್‌ಪುರದ ಗಡಿ ಪ್ರದೇಶವಾದ ಮಾಧೋಪುರ ಹೆಡ್‌ವರ್ಕ್ಸ್ ಬಳಿ ಸಿಲುಕಿಕೊಂಡಿದ್ದ 22 ಸೈನಿಕರು ಸೇರಿ 25 ಜನರನ್ನು ಮಂಗಳವಾರದಿಂದ ಸ್ಥಳಾಂತರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 6 ಗಂಟೆಗೆ, ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ ಸೇನಾ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಹೊರಟವು. ಈ ವೇಳೆ ಕಟ್ಟಡದಲ್ಲಿ ಸಿಲುಕಿದ್ದ ಎಲ್ಲ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈ ಜನರು ಆಶ್ರಯ ಪಡೆದಿದ್ದ ಕಟ್ಟಡವು ಸ್ಥಳಾಂತರಿಸಿದ ಸ್ವಲ್ಪ ಸಮಯದ ನಂತರ ಕುಸಿದು ಬಿದ್ದಿತು, ಇದು ರಕ್ಷಣಾ ಕಾರ್ಯದ ಸಮಯೋಚಿತತೆ ಮತ್ತು ನಿಖರತೆಯನ್ನು ಎತ್ತಿ ತೋರಿಸುತ್ತದೆ ಎಂದು ವಕ್ತಾರರು ಹೇಳಿದರು.
ಮಾತ್ರವಲ್ಲದೇ "ಈ ಯಶಸ್ವಿ ಕಾರ್ಯಾಚರಣೆಯು ಮತ್ತೊಮ್ಮೆ ಜೀವಗಳನ್ನು ರಕ್ಷಿಸುವ ಭಾರತೀಯ ಸೇನೆಯ ಅಚಲ ಬದ್ಧತೆ ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸೇನೆ ಮತ್ತು ಸ್ಥಳೀಯ ಅಧಿಕಾರಿಗಳ ನಡುವಿನ ಸಿನರ್ಜಿ... ಸಂಭಾವ್ಯ ದುರಂತವನ್ನು (ತಪ್ಪಿಸಿತು)" ಎಂದು ಅವರು ಹೇಳಿದರು.
ಪಂಜಾಬ್‌ನ ಕೆಲವು ಭಾಗಗಳಲ್ಲಿ ನಿರಂತರ ಭಾರೀ ಮಳೆಯಿಂದಾಗಿ ವಿವಿಧ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಮತ್ತು ಕಾಲೋಚಿತ ಹೊಳೆಗಳು ಉಕ್ಕಿ ಹರಿಯುತ್ತಿವೆ.