ಚಂಡೀಗಢ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ರಾವಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದ ಅಪಾರ ಹಾನಿಯಾಗಿದ್ದು, ಕಾಂಗ್ರಾ ಮತ್ತು ಚಂಬಾ ಜಿಲ್ಲೆಯಲ್ಲಿ ಶಾಲೆಗಳು, ಪಂಚಾಯತ್ ಕಟ್ಟಡಗಳು, ಸೇತುವೆಗಳು ಮತ್ತು ಇತರ ಪ್ರಮುಖ ಕಟ್ಟಡಗಳು ಕೊಚ್ಚಿ ಹೋಗಿವೆ.
ಭೀಕರ ಪ್ರವಾಹದಿಂದ ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಆದರೆ ಪ್ರತ್ಯೇಕ ಭೂಕುಸಿತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಪಿರ್ ಪಂಜಾಲ್ ಮತ್ತು ಧೌಲಾಧರ್ ಶ್ರೇಣಿಗಳ ನಡುವೆ ಇರುವ ಕಂಗ್ರಾದ ಬಡಾ ಭಂಗಲ್‌ನಲ್ಲಿ, ಪಂಚಾಯತ್ ಘರ್, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡಗಳು, ನಾಗರಿಕ ಸರಬರಾಜು ಅಂಗಡಿ, ಆಯುರ್ವೇದ ಔಷಧಾಲಯ ಹಾಗೂ ಎರಡು ಸೇತುವೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಈ ಕಟ್ಟಡಗಳಲ್ಲಿ ಸಂಗ್ರಹಿಸಲಾದ ಪಡಿತರ ಮತ್ತು ಔಷಧಿಗಳ ದಾಸ್ತಾನು ಸಹ ನೀರು ಪಾಲಾಗಿದೆ.
ಆಗಸ್ಟ್ 26 ರಂದು ಸಂಭವಿಸಿದ ಪ್ರವಾಹ ಗ್ರಾಮವನ್ನು "ತೀವ್ರ ಅಪಾಯ"ಕ್ಕೆ ಸಿಲುಕಿದ್ದು, ವೈಮಾನಿಕ ಸಮೀಕ್ಷೆ ಮತ್ತು ತಕ್ಷಣದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಂದು ಸರ್ಪಂಚ್ ಮಾನಸ ರಾಮ್ ಭಂಗಾಲಿಯಾ ಅವರು ಕಾಂಗ್ರಾದ ಜಿಲ್ಲಾಧಿಕಾರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
"ಗ್ರಾಮದಲ್ಲಿ 300 ಕ್ಕೂ ಹೆಚ್ಚು ನಿವಾಸಿಗಳು ಸಿಲುಕಿಕೊಂಡಿದ್ದಾರೆ. ಆದರೆ ಕನಿಷ್ಠ 150 ಕುರುಬರು ಮತ್ತು ನೂರಾರು ಮೇಕೆಗಳು, ಕುರಿಗಳು, ದನಗಳು ಅಪಾಯದಲ್ಲಿ ಸಿಲುಕಿಕೊಂಡಿವೆ" ಎಂದು ಅವರು ಹೇಳಿದ್ದಾರೆ.
"ಪರಿಹಾರ ಒದಗಿಸುವಲ್ಲಿ ವಿಳಂಬವಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡಿಸಬಹುದು. ಏಕೆಂದರೆ ನಿವಾಸಿಗಳು ಆಹಾರ ಮತ್ತು ಔಷಧಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ" ಎಂದು ಅವರು ಎಚ್ಚರಿಸಿದ್ದಾರೆ.
ಚಂಬಾದಲ್ಲಿ ಭೂಕುಸಿತದಿಂದ ನಾಲ್ವರು ಸಾವು
ಏತನ್ಮಧ್ಯೆ, ಚಂಬಾ ಜಿಲ್ಲೆಯ ಹಲೂನ್ ಗ್ರಾಮದಲ್ಲಿ, ರಾವಿ ನದಿ ಉಕ್ಕಿ ಹರಿದ ನಂತರ ಹೆಚ್ಚಿನ ಭಾಗ ಮುಳುಗಿದೆ. ಕನಿಷ್ಠ ಒಂಬತ್ತು ಮನೆಗಳು ಕೊಚ್ಚಿಹೋಗಿವೆ ಮತ್ತು ಇನ್ನೂ ಹಲವಾರು ಮನೆಗಳು ಅಪಾಯದಲ್ಲಿವೆ. ಅದೃಷ್ಟವಶಾತ್, ಎಲ್ಲಾ ಕುಟುಂಬಗಳನ್ನು ಸಕಾಲದಲ್ಲಿ ಸ್ಥಳಾಂತರಿಸಲಾಯಿತು, ಇದರಿಂದಾಗಿ ಸಾವುನೋವುಗಳು ತಪ್ಪಿವೆ.
ಆದಾಗ್ಯೂ, ಕಳೆದ 24 ಗಂಟೆಗಳಲ್ಲಿ ಚಂಬಾದಲ್ಲಿ ಸಂಭವಿಸಿದ ಪ್ರತ್ಯೇಕ ಭೂಕುಸಿತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.