ಅಹಮದಾಬಾದ್: 2018ರ ಕುಖ್ಯಾತ ಬಿಟ್‌ಕಾಯಿನ್ ಸುಲಿಗೆ ಪ್ರಕರಣದಲ್ಲಿ ಅಹಮದಾಬಾದ್ ನಗರ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಒಂದು ಐತಿಹಾಸಿಕ ತೀರ್ಪು ನೀಡಿದ್ದು, ಬಿಜೆಪಿ ಮಾಜಿ ಶಾಸಕ ನಳಿನ್ ಕೊಟಾಡಿಯಾ ಮತ್ತು ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 14 ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿದೆ.
ಸೂರತ್ ಮೂಲದ ಬಿಲ್ಡರ್ ಮತ್ತು ಕ್ರಿಪ್ಟೋಕರೆನ್ಸಿ ವ್ಯಾಪಾರಿ ಶೈಲೇಶ್ ಭಟ್ ಅವರ ಅಪಹರಣದೊಂದಿಗೆ ಪ್ರಾರಂಭವಾದ ಈ ಪ್ರಕರಣವು ಗುಜರಾತ್‌ನಲ್ಲಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ನಡುವಿನ ಅಕ್ರಮವನ್ನು ಬಹಿರಂಗಪಡಿಸಿತ್ತು.
2018 ರಲ್ಲಿ ಗುಜರಾತ್ ಅನ್ನೇ ಬೆಚ್ಚಿಬೀಳಿಸಿದ್ದ ಬಿಟ್‌ಕಾಯಿನ್ ಹಗರಣದ ಅಪರಾಧಿಗಳಿಗೆ ಅಂತಿಮವಾಗಿ ಶಿಕ್ಷೆಯಾಗಿದ್ದು, ಅಹಮದಾಬಾದ್ ನಗರ ಸೆಷನ್ಸ್ ನ್ಯಾಯಾಲಯವು ಶುಕ್ರವಾರ 14 ಜನ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಹುಕೋಟಿ ಬಿಟ್‌ಕಾಯಿನ್ ದಂಧೆಯಲ್ಲಿ ಭಾಗಿ, ಅಪಹರಣ ಮತ್ತು ಸುಲಿಗೆ ಆರೋಪ ಎದುರಿಸುತ್ತಿದ್ದ ಮಾಜಿ ಬಿಜೆಪಿ ಶಾಸಕ ನಳಿನ್ ಕೊಟಾಡಿಯಾ, ಆಗಿನ ಅಮ್ರೇಲಿ ಎಸ್ಪಿ ಜಗದೀಶ್ ಪಟೇಲ್ ಮತ್ತು ಅಂದಿನ ಎಲ್‌ಸಿಬಿ ಪಿಐ ಅನಂತ್ ಪಟೇಲ್ ಸೇರಿದಂತೆ 14 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಶೈಲೇಶ್ ಭಟ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ, ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಿತು. ಅಹಮದಾಬಾದ್‌ನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಎಸಿಬಿ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಸರ್ಕಾರ ಆರೋಪಿಗಳ ವಿರುದ್ಧ 172 ಸಾಕ್ಷಿಗಳನ್ನು ಹಾಜರು ಪಡಿಸಿತ್ತು.
ಇದಕ್ಕೆ ತದ್ವಿರುದ್ಧವಾಗಿ, ಪ್ರತಿವಾದಿಯು ಒಬ್ಬ ಸಾಕ್ಷಿಯನ್ನು ಮಾತ್ರ ಹಾಜರುಪಡಿಸಲು ಸಾಧ್ಯವಾಯಿತು ಮತ್ತು 92 ಸಾಕ್ಷಿಗಳು ಪ್ರತಿಕೂಲವಾಗಿ ತಿರುಗಿಬಿದ್ದಿದ್ದಾರೆಂದು ಹೇಳಲಾಗಿದ್ದರೂ, ನ್ಯಾಯಾಲಯವು ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳು ಮತ್ತು ವಾದವನ್ನು ಪರಿಗಣಿಸಿ ಶಿಕ್ಷೆ ನೀಡಿದೆ.
ಸುಮಾರು ಮೂರು ತಿಂಗಳ ವಾದ, ವಾದ ಪ್ರತಿಗಳ ನಂತರ, ನ್ಯಾಯಾಲಯವು ಈ ಸಂವೇದನಾಶೀಲ ಹಗರಣದ ಎಲ್ಲಾ 14 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಐತಿಹಾಸಿಕ ತೀರ್ಪು ನೀಡಿದೆ.
ಆರೋಪಿಗಳು, ಫೆಬ್ರವರಿ 2018ರಲ್ಲಿ, ಗಾಂಧಿನಗರದ ಸಿಬಿಐ ಕಚೇರಿಯವರೆಂದು ಹೇಳಿಕೊಂಡು ಸೂರತ್ ಬಿಲ್ಡರ್ ಶೈಲೇಶ್ ಭಟ್‌ಗೆ ಬೆದರಿಕೆ ಹಾಕಿ, ಅವರನ್ನು ಪೆಟ್ರೋಲ್ ಪಂಪ್‌ನಿಂದ ಅಪಹರಿಸಿ, ಥಳಿಸಿ, ಸರ್ಕಾರಿ ವಾಹನಗಳನ್ನು ಬಳಸಿಕೊಂಡು, ಅಮ್ರೇಲಿ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಫಾರ್ಮ್‌ಹೌಸ್‌ಗೆ ಎಳೆದೊಯ್ದಿದೆ ಎಂದು ಆರೋಪಿಸಲಾಗಿದೆ.
ಒಮ್ಮೆ ಅಪಹರಣಕಾರರ ಬಂಧನದಲ್ಲಿದ್ದಾಗ, ಭಟ್ ಅವರಿಗೆ ಸುಮಾರು 9 ಕೋಟಿ ರೂ. ಮೌಲ್ಯದ 176 ಬಿಟ್‌ಕಾಯಿನ್‌ಗಳನ್ನು ಹಂಚಿಕೊಳ್ಳಲು ಒತ್ತಾಯಿಸಲಾಯಿತು ಮತ್ತು ನಂತರ ಹೆಚ್ಚಿನ ಡಿಜಿಟಲ್ ಕರೆನ್ಸಿ ಹಾಗೂ ಹಣ ವರ್ಗಾಯಿಸಲು ಒತ್ತಾಯಿಸಲಾಯಿತು. ಅಪಹರಣಕಾರರು ಅನಂತ್ ಪಟೇಲ್ ಅವರ ಖಾತೆಗೆ 12 ಕೋಟಿ ರೂ. ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದರು ಮತ್ತು 50 ಕೋಟಿ ರೂ. ಸುಲಿಗೆಗೆ ಯತ್ನಿಸಿದ್ದರು.
ತೀವ್ರ ತನಿಖೆಯ ನಂತರ ಸಿಐಡಿ ಕ್ರೈಮ್, ಅನಂತ್ ಪಟೇಲ್ ಮತ್ತು ಸೂರತ್ ಮೂಲದ ವಕೀಲ ಕೇತನ್ ಪಟೇಲ್ ಸೇರಿದಂತೆ 10 ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿತ್ತು. ವಿಚಾರಣೆಯಲ್ಲಿ ಆಗಿನ ಎಸ್ಪಿ ಜಗದೀಶ್ ಪಟೇಲ್ ಮತ್ತು ಮಾಜಿ ಶಾಸಕ ನಳಿನ್ ಕೊಟಾಡಿಯಾ ಅವರ ಹೆಸರುಗಳು ಬಹಿರಂಗಗೊಂಡವು. ಈ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಹೊತ್ತಿದ್ದ ಕೊಟಾಡಿಯಾ ಭೂಗತರಾದರು. ಮಹಾರಾಷ್ಟ್ರದ ಧುಲಿಯಾದಿಂದ ಅವರನ್ನು ಅಂತಿಮವಾಗಿ ಬಂಧಿಸುವ ಮೊದಲು ಜಾಮೀನು ರಹಿತ ವಾರಂಟ್ ಹೊರಡಿಸಲಾಯಿತು ಮತ್ತು ನಂತರ 2019 ರಲ್ಲಿ ಷರತ್ತುಬದ್ಧ ಜಾಮೀನು ನೀಡಲಾಯಿತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಕೋರ್ಟ್, ಉನ್ನತ ಪೊಲೀಸ್ ಅಧಿಕಾರಿ, ಸಿಬಿಐ ಅಧಿಕಾರಿ, ವಕೀಲರು ಮತ್ತು ಮಾಜಿ ಶಾಸಕ ಸೇರಿದಂತೆ 14 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.