ಪಿಥೋರಗಢ: ಉತ್ತರಾಖಂಡದ ಪಿಥೋರಗಢದಲ್ಲಿರುವ ಧೌಲಿಗಂಗಾ ವಿದ್ಯುತ್ ಸ್ಥಾವರದ ಸಾಮಾನ್ಯ ಮತ್ತು ತುರ್ತು ಸುರಂಗಗಳಲ್ಲಿ ಭಾನುವಾರ ಭೂಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಜಲವಿದ್ಯುತ್ ನಿಗಮ ನಿಯಮಿತದ(NHPC) ಹತ್ತೊಂಬತ್ತು ಕಾರ್ಮಿಕರು ವಿದ್ಯುತ್ ಕೇಂದ್ರದೊಳಗೆ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಶೇಷಗಳನ್ನು ತೆಗೆದುಹಾಕಲು ಯಂತ್ರಗಳನ್ನು ನಿಯೋಜಿಸಲಾಗಿದೆ ಮತ್ತು ಸಂಜೆಯ ವೇಳೆಗೆ ದಾರಿ ತೆರವುಗೊಳಿಸಲಾಗುವುದು. ನಂತರ ಎಲ್ಲಾ ಕಾರ್ಮಿಕರು ಹೊರಬರಲು ಸಾಧ್ಯವಾಗುತ್ತದೆ ಎಂದು ಧಾರ್ಚುಲಾ ಜಿಲ್ಲಾಧಿಕಾರಿ ಜಿತೇಂದ್ರ ವರ್ಮಾ ಅವರು ಹೇಳಿದ್ದಾರೆ.
ಜಿಲ್ಲೆಯ ಧಾರ್ಚುಲಾ ಬಳಿಯ ಈಲಗಢ ಪ್ರದೇಶದಲ್ಲಿ ಧೌಲಿಗಂಗಾ ವಿದ್ಯುತ್ ಯೋಜನೆಯ ಸಾಮಾನ್ಯ ಮತ್ತು ತುರ್ತು ಸುರಂಗಗಳಿಗೆ ಹೋಗುವ ಮಾರ್ಗವು ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಮುಚ್ಚಿಹೋಗಿದೆ.
ನಿರಂತರವಾಗಿ ಅವಶೇಷಗಳು ಬೀಳುತ್ತಿದ್ದರೂ, ಜೆಸಿಬಿ ಯಂತ್ರಗಳ ಸಹಾಯದಿಂದ ಮಾರ್ಗವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ವಿದ್ಯುತ್ ಕೇಂದ್ರಕ್ಕೆ ಹೋಗುವ ಮಾರ್ಗವನ್ನು ತೆರೆದ ನಂತರ ಅವರು ಹೊರಬರುತ್ತಾರೆ ಎಂದು ವರ್ಮಾ ಹೇಳಿದ್ದಾರೆ.
ವಿದ್ಯುತ್ ಯೋಜನೆಯಿಂದ ವಿದ್ಯುತ್ ಉತ್ಪಾದನೆ ಸಾಮಾನ್ಯವಾಗಿ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.