ನವದೆಹಲಿ: ಸಂಸತ್ತಿನಲ್ಲಿ "ನಾಟಕ ಬೇಡ, ಕೇವಲ ಚರ್ಚೆ" ಎಂದು ಚಳಿಗಾಲದ ಅಧಿವೇಶನಕ್ಕೂ ಮುನ್ನ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.
ಕಳೆದ 11 ವರ್ಷಗಳಲ್ಲಿ ಸರ್ಕಾರವು ಸಂಸತ್ತಿನ ಸಭ್ಯತೆಯನ್ನು ವ್ಯವಸ್ಥಿತವಾಗಿ ತುಳಿದು ಸಂಸದೀಯ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಅವಸರದಿಂದ ಮಸೂದೆಗಳ ಅಂಗೀಕಾರವನ್ನು ಎತ್ತಿ ತೋರಿಸಿದರು. ಕಳೆದ ಮಳೆಗಾಲದ ಅಧಿವೇಶನದಲ್ಲಿ 12 ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸಲಾಯಿತು. ಕೆಲವು 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತು ಯಾವುದೇ ಚರ್ಚೆಯಿಲ್ಲದೆ ಇವು ಅಂಗೀಕರಿಸಲ್ಪಟ್ಟವು. ಸಂಸತ್ತಿನ ಮೂಲಕ ಸರ್ಕಾರ ಮಸೂದೆಗಳನ್ನು ಬುಲ್ಡೋಜರ್ ಮಾಡಿದ್ದಕ್ಕೆ GST, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ವಿವಾದಾತ್ಮಕ "ರೈತ ವಿರೋಧಿ ಕಾನೂನುಗಳು" ಸೇರಿದಂತೆ ಪ್ರಮುಖ ವಿಧೇಯಕಗಳೇ ಉದಾಹರಣೆ ಎಂದಿದ್ದಾರೆ.
"ಚಳಿಗಾಲದ ಅಧಿವೇಶನದ ಮೊದಲ ದಿನದಂದು, ಸಂಸತ್ತಿನಲ್ಲಿ ನಿಜವಾದ ಸಮಸ್ಯೆಗಳನ್ನು ಪರಿಹರಿಸುವ ಬದಲು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ 'ಡ್ರಾಮಾಬಾಜಿ ತೋರಿಸಿದ್ದಾರೆ'! ಎಂದು ಖರ್ಗೆ ಕಿಡಿ ಕಾರಿದ್ದಾರೆ.
ಮಣಿಪುರ ಪರಿಸ್ಥಿತಿಯಂತಹ ನಿರ್ಣಾಯಕ ಸಮಸ್ಯೆಗಳನ್ನು ಸರ್ಕಾರ ನಿರ್ವಹಿಸುವ ರೀತಿಯನ್ನು ಖರ್ಗೆ ಟೀಕಿಸಿದ್ದು, ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವವರೆಗೂ ಸರ್ಕಾರ ಮೌನವಾಗಿತ್ತು ಎಂದು ಗಮನಿಸಿದರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಸಮಯದಲ್ಲಿ ಒತ್ತಡದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (BLO) ಸಾವುಗಳನ್ನು ಖರ್ಗೆ ಮತ್ತಷ್ಟು ಎತ್ತಿ ತೋರಿಸಿದ್ದಾರೆ.
“ಮತಗಳ್ಳತನ ಆರೋಪಗಳು ಸೇರಿದಂತೆ ಪ್ರಮುಖ ಕಾಳಜಿಗಳನ್ನು ಎತ್ತಲು ವಿರೋಧ ಪಕ್ಷವು ಬದ್ಧವಾಗಿದೆ ಮತ್ತು ಸಂಸತ್ತಿನಲ್ಲಿ ಇವುಗಳನ್ನು ಎತ್ತಿ ತೋರಿಸುವುದನ್ನು ಮುಂದುವರಿಸುತ್ತದೆ. ಬಿಜೆಪಿ ಈಗ ಈ ಗೊಂದಲದ ನಾಟಕವನ್ನು ಕೊನೆಗೊಳಿಸಬೇಕು ಮತ್ತು ಜನರನ್ನು ಕಾಡುತ್ತಿರುವ ನೈಜ ಸಮಸ್ಯೆಗಳ ಕುರಿತು ಚರ್ಚೆಯಲ್ಲಿ ತೊಡಗಬೇಕು” ಎಂದು ಖರ್ಗೆ ಆಗ್ರಹಿಸಿದ್ದಾರೆ.
“ಸಾಮಾನ್ಯ ಜನರು ನಿರುದ್ಯೋಗ, ಹಣದುಬ್ಬರ, ಆರ್ಥಿಕ ಅಸಮಾನತೆ ಮತ್ತು ದೇಶದ ಸಂಪನ್ಮೂಲಗಳ ಲೂಟಿಯ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಅಧಿಕಾರದಲ್ಲಿರುವವರು ದುರಹಂಕಾರದಿಂದ 'ನಾಟಕ' ಮಾಡುತ್ತಿದ್ದಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಅಧಿವೇಶನಕ್ಕೂ ಮುನ್ನ ಮಾತನಾಡಿದ ಪ್ರಧಾನಿ, ಸಂಸತ್ತು ನಾಟಕ ಪ್ರದರ್ಶನಕ್ಕೆ ಅಲ್ಲ, ಚರ್ಚೆ ಮಾಡಲು ಇರುವ ಸ್ಥಳ ಎಂದು ಹೇಳಿದರು. ಚುನಾವಣಾ ಸೋಲುಗಳಿಂದ ಉಂಟಾಗುವ ಹತಾಶೆಗಳನ್ನು ಮೀರಿ ವಿರೋಧ ಪಕ್ಷಗಳು ಎದ್ದು ನಿಲ್ಲಬೇಕೆಂದು ಒತ್ತಾಯಿಸಿದರು. ವಿಶೇಷವಾಗಿ ಬಿಹಾರ ಸೋಲು.