ನವದೆಹಲಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ವಿರೋಧ ಪಕ್ಷಗಳುತೀವ್ರ ಘೋಷಣೆ ಕೂಗಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
ಅಧಿವೇಶನದ ಮೊದಲ ದಿನ ಕಲಾಪ ಆರಂಭವಾಗುತ್ತಿದ್ದಂತೆ ಇದೇ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಉಂಟು ಮಾಡಿದ್ದರಿಂದ ಕಲಾಪವನ್ನು ಮೊದಲಿಗೆ ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಲಾಗಿತ್ತು.
ತದನಂತರ ಕಲಾಪ ಸಮಾವೇಶಗೊಂಡಲೂ ಹಲವು ವಿರೋಧ ಪಕ್ಷಗಳ ಸದಸ್ಯರು SIR ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಲಾಪವನ್ನು ಮಧ್ಯಾಹ್ನವನ್ನು 2 ಗಂಟೆಯವರೆಗೂ ಮುಂದೂಡಲಾಯಿತು.
ಶೂನ್ಯ ವೇಳೆಯ 12 ನಿಮಿಷಗಳ ಅವಧಿಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-2026 ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಮಂಡಿಸುವುದರ ಜೊತೆಗೆ ಮೂರು ಮಸೂದೆಗಳನ್ನು ಮಂಡಿಸಿದರು.
ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ವಿಧಿಸುವ ಮತ್ತು ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಸೆಸ್ ವಿಧಿಸುವ ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದ, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ 2025 ಅನ್ನು ಹಣಕಾಸು ಸಚಿವರು ಮಂಡಿಸಿದರು.
ಇದಕ್ಕೂ ಮುನ್ನಾ ಮಣಿಪುರ ಜಿಎಸ್‌ಟಿಯ ಮೇಲೆ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು ಏಕೆಂದರೆ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಲ್ಲಿದೆ. ವಿರೋಧ ಪಕ್ಷದ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಲೋಕಸಭಾ ಸ್ಪೀಕರ್ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.