ಚೆನ್ನೈ: ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲು ಕೆಟ್ಟ ನಿಂತರಿಂದ ಪ್ರಯಾಣಿಕರು ಪರದಾಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ವಿಮ್ಕೊ ನಗರ ಡಿಪೋ ಕಡೆಗೆ ತೆರಳುತ್ತಿದ್ದ ಮೆಟ್ರೋ ರೈಲು ತಾಂತ್ರಿಕ ದೋಷದಿಂದ ಸುರಂಗ ಮಾರ್ಗದಲ್ಲಿ ಕೆಟ್ಟು ನಿಂತಿದೆ. ಇದರಿಂದ ದಿಗಿಲುಗೊಂಡ ಪ್ರಯಾಣಿಕರು ಮುಂದೆ ಏನು ಮಾಡಬೇಕು ಎಂಬುದು ಸ್ವಲ್ಪ ಹೊತ್ತು ಪರದಾಡಿದ್ದಾರೆ. ತದನಂತರ ರೈಲ್ವೆ ಹಳಿಯಲ್ಲಿ ನಡೆದು ಹೋಗಿದ್ದಾರೆ.
ವಿಮ್ಕೊ ನಗರ ಡಿಪೋ ಮತ್ತು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣದ ನಡುವಿನ ಸುರಂಗಮಾರ್ಗದಲ್ಲಿ ಮೆಟ್ರೋ ಕೆಟ್ಟು ನಿಂತಿದೆ. ಕರೆಂಟ್ ಇಲ್ಲದೆಯೂ ಭಯಭೀತಿಗೊಂಡಿದ್ದಾಗಿ ಪ್ರಯಾಣಿಕರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋಗಳು ವೈರಲ್ ಆಗಿದ್ದು, ಪ್ರಯಾಣಿಕರು ಹ್ಯಾಂಡ್‌ರೈಲ್ ಹಿಡಿದು, ಹೊರಗೆ ಹೋಗಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದಾದ 10 ನಿಮಿಷಗಳ ನಂತರ ಅಲ್ಲಿಂದ 500 ಮೀಟರ್ ದೂರದಲ್ಲಿದ್ದ ಹೈಕೋರ್ಟ್ ಮೆಟ್ರೋ ನಿಲ್ದಾಣಕ್ಕೆ ರೈಲು ಹಳಿ ಮೇಲೆ ನಡೆದುಹೋಗಲು ಅನೌನ್ಸ್ ಮೆಂಟ್ ಬಂದಿತು ಎಂದು ಪ್ರಯಾಣಿಕರೊಬ್ಬರು ವಿವರಿಸಿದರು.
ಮತ್ತೊಂದು ವಿಡಿಯೋದಲ್ಲಿ ಪ್ರಯಾಣಿಕರು ಸುರಂಗ ಮಾರ್ಗದಲ್ಲಿ ಸಾಲಾಗಿ ಹೋಗುತ್ತಿರುವುದನ್ನು ಕಾಣಬಹುದು. ವಿದ್ಯುತ್ ಅಥವಾ ತಾಂತ್ರಿಕ ಸಮಸ್ಯೆಯಿಂದ ಅಡಚಣೆ ಉಂಟಾಗಿರಬಹುದು. ಸೇವೆ ಸಹಜ ಸ್ಥಿತಿಗೆ ಮರಳಿದೆ ಎಂದು ಚೆನ್ನೈ ಮೆಟ್ರೋ ರೈಲು ಮಾಹಿತಿ ನೀಡಿದೆ.