ವಾರಣಾಸಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇಗಿಕೆಯತ್ತ ಆಗಂತುಕನೋರ್ವ ನುಗ್ಗಿದ ಘಟನೆ ವರದಿಯಾಗಿದ್ದು, ಕೂಡಲೇ ಕಮಾಂಡೋ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.
ಹೌದು.. ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯ ನಮೋ ಘಾಟ್‌ನಲ್ಲಿ ನಡೆಯುತ್ತಿದ್ದ ಕಾಶಿ ತಮಿಳು ಸಂಗಮ್ 4.0 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ವ್ಯಕ್ತಿಯೊಬ್ಬ ವೇದಿಕೆಯತ್ತ ಸಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಅಲ್ಲಿಯೇ ಇದ್ದ ಪೊಲೀಸರು ಮತ್ತು ಭದ್ರತಾ ಪಡೆಯ ಕಮಾಂಡೋಗಳು ಆತನನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಆತ ಪಾನಮತ್ತನಾಗಿದ್ದು ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.
ಅದಾಗ್ಯೂ ಮುಖ್ಯಮಂತ್ರಿಗಳ ಭದ್ರತಾ ಪಡೆಯ ಕಮಾಂಡೋಗಳು ಅತನನ್ನು ಕೆಲಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
"ಆ ಯುವಕ ಭಾರೀ ಮದ್ಯವ್ಯಸನಿಯಾಗಿದ್ದು, ಆತನನ್ನು ಹೆಸರು ಜೋಗಿಂದರ್ ಗುಪ್ತಾ ಎಂದು ಗುರುತಿಸಲಾಗಿದೆ. ಈತ ನಗರ ಠಾಣೆಯಲ್ಲಿ ನೀರು ಮಾರುತ್ತಾ ತನ್ನ ಜೀವನ ನಿರ್ವಹಣೆ ಮಾಡುತ್ತಿದ್ದ.
ಸ್ಥಳೀಯರ ಪ್ರಕಾರ ಜೋಗಿಂದರ್ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾನೆ" ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿದುಷ್ ಸಕ್ಸೇನಾ ಹೇಳಿದ್ದಾರೆ.
ಪ್ರಸ್ತುತ ಆರೋಪಿ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಮತ್ತು ನಂತರ ಮಾನಸಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತ ನಿಯಮಿತ ಮಧ್ಯವ್ಯಸನಿಯಾಗಿದ್ದು, ಮಾನಸಿಕವಾಗಿ ಅಸ್ಥಿರನಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.