ಕಾನ್ಪುರ: ಗೋಲ್ಗಪ್ಪ (golgappa) ತಿನ್ನೋಕೆ ಹೋದ ಮಹಿಳೆಯೊಬ್ಬರ ದವಡೆ ಲಾಕ್ ಆಗಿದ್ದು ಬಾಯಿ ಮುಚ್ಚಲೂ ಆಗದೆ ಪರದಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಔರಿಯಾ ಜಿಲ್ಲೆಯ ದಿಬಿಯಾಪುರ ಪ್ರದೇಶದ ಗೌರಿ ಕಿಶನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೋಲ್ಗಪ್ಪಾ ತಿನ್ನಲು ಹೋದ ಗ್ರಾಮದ 42 ವರ್ಷದ ನಿವಾಸಿ ಇಂಕಲಾ ದೇವಿ ಅವರ ದವಡೆ ಲಾಕ್ ಆಗಿದೆ.
ಈ ವೇಳೆ ಆಕೆಯ ದವಡೆಯ ಮೂಳೆ ಜರುಗಿದ್ದು ಆಕೆ ಬಾಯಿ ಮುಚ್ಚಲು ಆಗದೆ ಪರದಾಡಿದ್ದಾರೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಕಾಕೋರ್ ಬಳಿಯ ಗೌರಿ ಕಿಶನ್ಪುರದ ನಿವಾಸಿ ವೀರೇಂದ್ರ ಅವರ ಪತ್ನಿ ಇಂಕಲಾ ದೇವಿ, ಸೊಸೆಗೆ ಹೆರಿಗೆ ನೋವು ಕಾಣಿಸಿಕೊಳ್ತಿದ್ದಂತೆ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿಯೇ ಅವರು ಉಳಿದುಕೊಂಡಿದ್ರು. ನಿನ್ನೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಗೋಲ್ಗಪ್ಪ ತಿನ್ನಲು ಹೋಗಿದ್ದಾರೆ.
ಎಲ್ಲರ ಜೊತೆ ಗೋಲ್ಗಪ್ಪ ತಿನ್ನುತ್ತಿದ್ದ ಇಂಕಲಾ ದೇವಿಗೆ ಬಾಯಿ ತೆರೆಯುತ್ತಿದ್ದಂತೆ ಶಾಕ್ ಆಗಿದೆ. ಅವರ ದವಡೆ ಲಾಕ್ ಆಗಿದ್ದು ದವಡೆ ಮೂಳೆ ಜರುಗಿದೆ. ಹೀಗಾಗಿ ಇಂಕಳಾದೇವಿ ಬಾಯಿ ಮುಚ್ಚಲು ಸಾಧ್ಯವಾಗಿಲ್ಲ.
ಇದ್ರಿಂದ ಅಕ್ಕಪಕ್ಕದವರು ಆಘಾತಕ್ಕೊಳಗಾಗಿದ್ದಾರೆ. ಇಂಕಲಾ ದೇವಿ ಸ್ಥಿತಿ ನೋಡಿದ ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ರೂ ಪ್ರಯೋಜನ ಆಗ್ಲಿಲ್ಲ. ನಂತ್ರ ಇಂಕಲಾ ದೇವಿಯವರನ್ನು ಹತ್ತಿರದ ದೊಡ್ಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಮುಂದೇನಾಯ್ತು?
ಪ್ರಸ್ತುತ ಇಂಕಲಾ ದೇವಿ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದು, ತೆರೆದ ಬಾಯಿಯನ್ನು ಮುಚ್ಚಲಾಗಿದೆ. ಆದ್ರೆ ಆಹಾರ ಸೇವನೆ ಮಾಡಲು, ಮಾತನಾಡಲು ಇಂಕಲಾ ತೊಂದರೆ ಅನುಭವಿಸ್ತಿದ್ದಾರೆ. ಅವರಿಗೆ ಬಾಯಿ ಮುಚ್ಚಲಾಗ್ತಿಲ್ಲ. ನೋವಾಗ್ತಿದೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಇನ್ನೊಂದೆರಡು ದಿನಗಳಲ್ಲಿ ಇಂಕಲಾ ಆರೋಗ್ಯ ಸುಧಾರಿಸುವ ಭರವಸೆ ನೀಡಲಾಗಿದೆ.
ರೋಗಿಯ ದವಡೆ ಸಂಪೂರ್ಣವಾಗಿ ಜರುಗಿತ್ತು. ನಾವು ಹಲವಾರು ಬಾರಿ ಪ್ರಯತ್ನಿಸಿದೆವು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಸೈಫೈ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದೇವೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ಹೇಳಿದ್ದಾರೆ. ನಾನು ಅಂತಹ ಪ್ರಕರಣವನ್ನು ಹಿಂದೆಂದೂ ನೋಡಿಲ್ಲ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗೋಲ್ಗಪ್ಪಾ ತಿನ್ನೋಕೆ ಗ್ರಾಮಸ್ಥರ ಹಿಂಜರಿಕೆ
ಇನ್ನು ಇಂಕಲಾ ದೇವಿ ಸ್ಥಿತಿ ನೋಡಿ ಜನರು ಕಂಗಾಲಾಗಿದ್ದಾರೆ. ಗೋಲ್ಗಪ್ಪ ಮಾಲೀಕ ಕೂಡ ದಂಗಾಗಿದ್ದಾನೆ. ಆದ್ರೆ ಇಂಥ ಘಟನೆ ಈವರೆಗೂ ನಡೆದಿರಲಿಲ್ಲ, ಇದೇ ಮೊದಲ ಬಾರಿ ಅಂತ ಸ್ಥಳೀಯರು ಹೇಳ್ತಿದ್ದಾರೆ. ಬೇಗ ಬೇಗ ಆಹಾರ ತಿನ್ನಲು ಪದೇ ಪದೇ ದೊಡ್ಡದಾಗಿ ಬಾಯಿ ಕಳೆದಾಗ ಅಥವಾ ದೊಡ್ಡ ಆಹಾರ ಸೇವನೆಗೆ ದೊಡ್ಡದಾಗಿ ಬಾಯಿ ತೆರೆದಾಗ ದವಡೆ ಜರುಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.