ನವದೆಹಲಿ: ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರಿಸಿ ಹೋಗಿದ್ದು, ಈ ನಡುವೆ ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ ಮಾಡಲಾಗಿದೆ ಎಂದ ಪಾಕಿಸ್ತಾನ ಆರೋಪವನ್ನು ಭಾರತ ಮಂಗಳವಾರ ತಿರಸ್ಕರಿಸಿದೆ.
ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ, ಪಾಕಿಸ್ತಾನದ ಹೇಳಿಕೆ ಆಧಾರರಹಿತ ಹಾಗೂ ಹಾಸ್ಯಸ್ಪದ ಎಂದು ಹೇಳಿದೆ.
ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಲ್ಲಿಸಲಾದ ಪಾಕಿಸ್ತಾನದ ಓವರ್‌ಫ್ಲೈಟ್ ವಿನಂತಿಯನ್ನು ಅದೇ ದಿನ ಸಂಜೆ 5:30 ರ ವೇಳೆಗೆ ತೆರವುಗೊಳಿಸಲಾಗಿದೆ, ಕೇವಲ ನಾಲ್ಕು ಗಂಟೆಗಳ ಅನುಮತಿ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಪಾಕಿಸ್ತಾನದ ವರದಿಗಳು ಭಾರತ ವಿರೋಧಿ ತಪ್ಪು ಮಾಹಿತಿ ಹರಡುವ ಮತ್ತೊಂದು ಪ್ರಯತ್ನ ಎಂದೂ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಕಿಡಿಕಾರಿದ್ದಾರೆ.
ತುರ್ತು ಮಾನವೀಯ ಸ್ಥಿತಿಯಲ್ಲಿ ಯಾವುದೇ ರಾಜಕೀಯ ಅಥವಾ ದ್ವೇಷ ಮನೋಭಾವಕ್ಕೆ ಆಸ್ಪದವಿಲ್ಲ. ನಾವು ಕೇವಲ ಕೆಲವೇ ಗಂಟೆಗಳಲ್ಲಿ ಅನುಮತಿ ನೀಡಿದ್ದೇವೆ. ಆರೋಪಗಳು ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.
ದಿತ್ವಾ ಚಂಡಮಾರುತದಿಂದ ತೀವ್ರ ಪ್ರವಾಹ, ಭೂಕುಸಿತ ಮತ್ತು ಮೂಲಸೌಕರ್ಯ ಹಾನಿಯಿಂದ ಶ್ರೀಲಂಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚಂಡಮಾರುತದ ಪರಿಣಾಮ ನವೆಂಬರ್ 16 ರಿಂದ ಕನಿಷ್ಠ 410 ಸಾವುಗಳು ಮತ್ತು 336 ಜನರು ನಾಪತ್ತೆಯಾಗಿದ್ದಾರೆಂದು ವಿಪತ್ತು ನಿರ್ವಹಣಾ ಕೇಂದ್ರ ವರದಿ ಮಾಡಿದೆ.
ಈ ನಡುವೆ ಪರಿಹಾರ ಒದಗಿಸಲು ಮತ್ತು ಚೇತರಿಕೆ ಪ್ರಯತ್ನಗಳನ್ನು ಬೆಂಬಲಿಸಲು ಭಾರತವು ಆಪರೇಷನ್ ಸಾಗರ್ ಬಂಧುವನ್ನು ಪ್ರಾರಂಭಿಸಿದೆ.
ಈ ನಡುವೆ ತನ್ನ ವಿಶೇಷ ವಿಮಾನವು 60 ಗಂಟೆಗಳಿಗೂ ಹೆಚ್ಚು ವಿಳಂಬವನ್ನು ಎದುರಿಸಿದೆ ಮತ್ತು 48 ಗಂಟೆಗಳ ನಂತರ ನೀಡಲಾದ ಭಾಗಶಃ ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನ ಭಾರತದ ವಿರುದ್ಧ ಆರೋಪವನ್ನು ಮಾಡಿದೆ